ಕೀರ್ತನೆ - 204     
 
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ - ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ ನಿಗಮಾಗಮ ಪುರಾಣಗಳನೋದಿ ತಿಳಿದು ಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥ ಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆ ಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥ ಪೊಟ್ಟೆಗುಡುವಗಳೆಲ್ಲ ಪರಮ ವೈಷ್ಣವರೆ ? ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆ ಅಂಗಲಿಂಗದ ನೆಲೆಯ ಗುರುತರಿಯದೆ ಜಂಗಮ ಸ್ಥಾವರದ ಹೊಲಬನರಿಯದ ಇಂಥ ಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆ ಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆ ಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥ ಕಳ್ಳ ಸುಳ್ಳರಿಗೆಲ್ಲ ವೀರ ಸ್ಪರ್ಗವುಂಟೆ? ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟು ಆಸೆಯನು ತೊರೆಯದೆಯೆ ತಪಕೆ ಕುಳಿತು ವಾಸನೆಯ ಗುರುತಿನಾ ಹೊಲಬನರಿಯದ ಇಂಥ ವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿ ಮೂರು ಮೂರ್ತಿಯ ಮೂರು ಕಡೆಯೊಳಿರಿಸಿ ಮಾರ ಪಿತನಹ ಕಾಗಿನೆಲೆಯಾದಿ ಕೇಶವನ ಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ?