ಕೀರ್ತನೆ - 203     
 
ಗೋವಿಂದ ಗೋವಿಂದ ಎನ್ನಲರಿಯದೆ - ವೃಥಾ ನೋವಿಂದ ಭಂಗವ ಪಡುವುದುಚಿತವೆ? ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿ ಕೋಣಗಳ ತಲೆಚೆಂಡ ಕುಟ್ಟಿಸುತ ಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ - ನಾರಾ- -ಯಣನ ನಾಮಸ್ಮರಣೆ ಮಾಡು ಮನವೆ ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿ ಕು೦ಡವನು ಹೊಕ್ಕು ಹೊರಡುವುದುಚಿತವೆ ಭಂಡರಂದದಿ ಬತ್ತಲೆಯೆ ಬರುವುದಾವಾಟ ಪು೦ಡರೀಕಾಕ್ಷನ ನೆನೆ ಕಂಡ್ಯ ಮನವೆ ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನು ಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನು ಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆ ಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡು ಹಗಲಿರುಳು ಅನ್ನಪಾನಕೆ ಹೋಗದೆ ಮೃಗವೈರಿಯಂತೇಕೆ ಕಿಸುಕೆಲೆವ ರಂಪಾಟ ಜಗದಾಧಿಪತಿಯ ನಾಮ ಸ್ಮರಿಸು ಮರುಳೆ ಉತ್ತಮರು ಸುರೆಯನೀ೦ಟುವರೆ ತರಹರಿಸಿ ಮದೋ- ನ್ಮತ್ತರಾಗಿ ಅಸಭ್ಯ ಶಬ್ದವ ನುಡಿವರೆ ಸತ್ತ ಹೆಣದಂತೆ ಬಿದ್ದಿಹುದಾವ ನೀತಿ ಪುರು -ಷೋತ್ತಮನ ನಾಮ ಸ್ಮರಣೆಯ ಮಾಡು ಮನವೆ ವೇದೋಕ್ತ ಪೂಜೆಯಲಿ ತೃಪ್ತಿಪಟ್ಟರೆ ನೀವು ಅದರಿಂದ ಫಲವೇನು ಪೇಳಿರಯ್ಕ ನಾದವನು ಕೇಳ್ದ ಹರಿಣದಂದದಿ ಕೆಡದೆ ಮಧು ಸೂದನನ ನಾಮ ಸ್ಮರಣೆಯ ಮಾಡು ಮರುಳೆ ನಿಂದಾಪವಾದ ಘಟಿಸುವುದೈಸೆ ಇದರಿಂದ ಮುಂದೆ ಮುಕ್ತಿಯು ನಿಮಗೆ ಸಾಧ್ಯವಹುದೆ ತಂದೆ ಶ್ರೀ ಕಾಗಿನೆಲೆಯಾದಿಕೇಶವ ನಾಮ ಒ೦ದೇ ವೈಕುಂಠ ಪದವನೈದಿಪುದಯ್ಯ