ಕೀರ್ತನೆ - 672     
 
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೆಂಕಟ ರಮಣಗಾರತಿಯೆತ್ತಿರೆ ಮತ್ಸ್ಯಾವತಾರಗೆ ಮಂದರೋದ್ಧಾರಗೆ ಉತ್ಸಾಹದಿ ಭೂಮಿ ತಂದವಗೆ || ವತ್ಸಗಾಗಿ ಕಂಬದಿಂದಲಿ ಬಂದ ಉತ್ಸವ ನರಸಿಂಹಗಾರತಿಯೆತ್ತಿರೆ ವಾಮನರೂಪದಿ ದಾನ ಬೇಡಿದವಗೆ ನೇಮದಿ ಕೊಡಲಿಯ ಪಿಡಿದವಗೆ || ರಾಮನಾಗಿ ದಶಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿಯೆತ್ತಿರೆ ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವವನೇರಿದಗೆ | ಭಕ್ತರ ಸಲಹುವ ಪುರಂದರವಿಠಲಗೆ ಮುತ್ತೈದೆಯರಾರತಿಯೆತ್ತಿರೆ