ರಾಗಿ ತಂದಿರಾ -ಭಿಕ್ಷಕೆ
ರಾಗಿ ತಂದಿರಾ
ಯೋಗ್ಯರಾಗಿ ಭೋಗ್ಯರಾಗಿ |
ಭಾಗ್ಯವಂತರಾಗಿ ನೀವು
ಅನ್ನದಾನವ ಮಾಡುವರಾಗಿ |
ಅನ್ನಛತ್ರವನಿಟ್ಟವರಾಗಿ ||
ಅನ್ಯವಾರ್ತೆಗಳ ಬಿಟ್ಟವರಾಗಿ |
ಅನುದಿನ ಭಜನೆಯ ಮಾಡುವರಾಗಿ
ಮಾತಾಪಿತರನು ಸೇವಿಪರಾಗಿ |
ಪಾತಕಕಾರ್ಯವ ಬಿಟ್ಟವರಾಗಿ ।
ಖ್ಯಾತಿಯಲ್ಲಿ ಮಿಗಿಲಾದವರಾಗಿ ।
ನೀತಿಮಾರ್ಗದಲಿ ಖ್ಯಾತರಾಗಿ
ಗುರುಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ ||
ಗುರುವಿನ ಪಾದವ ಸ್ಮರಿಸುವರಾಗಿ |
ಪರಮ ಪುಣ್ಯವನು ಮಾಡುವರಾಗಿ
ವೇದ ಪುರಾಣವ ತಿಳಿದವರಾಗಿ |
ಮೇದಿನಿಯಾಳುವಂಥವರಾಗಿ |
ಸಾಧುಧರ್ಮವಾಚರಿಸುವರಾಗಿ |
ಓದಿ ಗ್ರಂಥಗಳ ಪಂಡಿತರಾಗಿ
ಆರರ ಮಾರ್ಗವ ಅರಿತವರಾಗಿ |
ಮೂರರ ಮಾರ್ಗವ ತಿಳಿದವರಾಗಿ ||
ಭೂರಿತತ್ವವನು ಬೆರೆತವರಾಗಿ |
ಕ್ರೂರರ ಸಂಗವ ಬಿಟ್ಟವರಾಗಿ
ಕಾಮಕ್ರೋಧಗಳನಳಿದವರಾಗಿ |
ನೇಮನಿಷ್ಠೆಗಳ ಮಾಡುವರಾಗಿ |
ಆ ಮಹಾಪದದಲಿ ಸುಖಿಸುವರಾಗಿ |
ಪ್ರೇಮದಿ ಕುಣಿಕುಣಿದಾಡುವರಾಗಿ
ಸಿರಿರಮಣನ ಸದಾ ಸ್ಮರಿಸುವರಾಗಿ |
ಕುರುಹಿಗೆ ಬಾಗುವಂತವರಾಗಿ |
ಕರೆಕರೆಸಂಸಾರ ನೀಗುವರಾಗಿ |
ಪುರಂದರವಿಠಲನ ಸೇವಿಪರಾಗಿ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ತತ್ತ್ವ ವಿವೇಚನೆ