ಋಣವೆಂಬ ಸೂತಕವು ಬಹು ಬಾಧೆ ಬಡಿಸುತ್ತಿದೆ |
ಗುಣನಿಧಿಯೆ ನೀ ಎನ್ನ ಕಡೆಹಾಯಿಸಯ್ಯ
ಒಡಲಿನಾಸೆಗೆ ಪರರ ಕಡೆಯಿಂದ ಧನವನ್ನು |
ತಡೆಯದಲೆ ತಂದು ಸಂತೋಷ ಪಡುವೆ ।
ಕೊಡುವ ವೇಳೆಗೆ ಅವರ ಬಿರುನುಡಿಗಳನು ಕೇಳ್ವ |
ಕಡು ಪಾಪವನ್ನು ನೀ ಕಡೆಹಾಯಿಸಯ್ಯ
ಕೊಟ್ಟ ದೊರೆಗಳು ಬಂದು ನಿಷ್ಟುರದ ಮಾತಾಡಿ |
ಎಷ್ಟು ಬಯ್ವರೊ ತಮ್ಮ ಮನದಣಿಯಲು ||
ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ ।
ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ
ಆಳಿದೊಡೆಯನ ಮಾತ ಕೇಳಿ ನಡೆಯಲು ಬಹುದು ।
ಊಳಿಗವ ಮಾಡಿ ಮನದಣಿಯ ಬಹುದು ||
ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |
ಪೇಳಲಳವಲ್ಲ ಋಣದವಗೊಂದು ಸೊಲ್ಲ
ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |
ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||
ಉರಿವ ಉರಿಯೊಳು ಹೊಕ್ಕು ಹೊರ ಹೊರಟು ಬರಬಹುದು ।
ಬೆರೆದು ಸೇರಲು ಬಹುದು ವೈರಿಗಳ ಮನೆಯ
ಹೆತ್ತ ಸೂತಕ ಹತ್ತುದಿನಕೆ ಪರಿಹಾರವು |
ಮೃತ್ಯು ಸೂತಕವು ಹನ್ನೆರಡು ದಿನವು ।।
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |
ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ
ಅವರ ದ್ರವ್ಯವ ದಾನ-ಧರ್ಮವನು ಮಾಡಿದರೆ |
ಅವರಿಗಲ್ಲದೆ ಪುಣ್ಯ ಇವರಿಗುಂಟೆ ॥
ಅವರ ದ್ರವ್ಯದಿ ತೀರ್ಥಯಾತ್ರೆಯನು ಮಾಡಿದರೆ |
ಅವರ ಮನೆಬಾಡಿಗೆಯ ಎತ್ತಿನಂದದಲಿ
ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ ।
ಕಂದಿ ಕುಂದಿದೆನಯ್ಯ ಕರುಣಾನಿಧೆ ॥
ಇಂದಿರಾರಮಣ ಶ್ರೀ ಪುರಂದರವಿಠಲನೆ |
ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ