ಗುಮ್ಮನ ಕರೆಯದಿರೆ-ಅಮ್ಮ ನೀನು |
ಗುಮ್ಮನ ಕರೆಯದಿರೆ
ಸುಮ್ಮನೆ ಇರುವೆನು ಅಮ್ಮಿಯ ಬೇಡೆನು |
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ
ಹೆಣ್ಣುಗಳಿರುವಲ್ಲಿಗೆ-ಹೋಗಿ ಅವರ-|
ಕಣ್ಣ ಮುಚ್ಚುವುದಿಲ್ಲವೆ ॥
ಚಿಣ್ಣರ ಬಡಿಯೆನು ಅಣ್ಣನ ಬಯ್ಯೆನು |
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ
ಬಾವಿಗೆ ಹೋಗೆ ಕಾಣೆ-ಅಮ್ಮ ನಾನು-|
ಹಾವಿನ ಮೇಲಾಡೆ ಕಾಣೆ ||
ಆವಿನ ಮೊಲೆಯೂಡೆ ಕರುಗಳನ್ನು ಬಿಡೆ |
ದೇವರಂತೆ ಒಂದು ಠಾವಲಿ ಕೊಡುವೆ
ಮಗನ ಮಾತನು ಕೇಳಿಬೇಗ-ಗೋಪಿದೇವಿ-|
ಮುಗುಳುನಗೆಯ ನಗುತ ||
ಜಗದ ಒಡೆಯ ಶ್ರೀ ಪುರಂದರವಿಠಲನ |
ಬಿಗಿದಪ್ಪಿಕೊಂಡಳು ಮೋಹದಿಂದಾಗ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ