ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |
ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ
ಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |
ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ |
ಅಂಗೈಯಲಿ ಧ್ವಜಪದ್ಮವಿರಾಜಿಪ ಕೈಯ ತೋರೊ |
ಅಂಗನೆಯರ ಉತ್ತುಂಗ ಕುಚದಲಿಟ್ಟ ಕೈಯ ತೋರೊ
ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ ।
ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ |
ಕಡುಹಿರಣ್ಯಾಕ್ಷನ ಒಡಲನು ಬಗೆದ-ಕೈಯ ತೋರೊ ।
ದೃಢ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ
ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ ।
ಬಲ್ಲಿದ ಮಲ್ಲರ ಮರ್ದಿಸಿ ಬಂದ-ಕೈಯ ತೋರೊ ||
ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ ।
ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ
ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ ।
ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ||
ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ ।
ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ
ಆಕಾಶದ ಚಂದ್ರಮನನು ಕರೆದ-ಕೈಯ ತೋರೊ ।
ನಾಕಪತಿಗೆ ಅಭಯವನಿತ್ತ-ಕೈಯ ತೋರೊ ।
ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ ।
ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ