ಜಗದಂತರ್ಯಾಮಿಯೆಂದೆನುತ ನಿನ್ನ
ನಿಗಮ ಸಾರುವ ಮಾತು ಪುಸಿಯೆ ರಂಗ
ಭೇದವಿಲ್ಲದೆ ಸಕಲ ಜೀವರನು ಪೊತ್ತಿಹಳು
ಭೂದೇವಿಯೆಂಬಾಕೆ ನಿನ್ನ ಅರ್ಧಾಂಗಿಯು
ಸಾಧನವು ಸಕಲ ಸಿರಿ ಸಂಪತ್ತುಗಳನೀವ
ಶ್ರೀದೇವಿ ನಿನ್ನ ಹಿರಿಯರಸಿಯೋ ದೇವ
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನು
ಬೊಂಬೆಗಳ ಮಾಡಿ ಭವರಂಗದಲಿ
ತುಂಬಿ ಕಲೆಗಳನೊತ್ತಿ ನೊಸಲ ಬರಹವ ಬರೆವ
ಅಂಬುಜೋದ್ಭವ ನಿನ್ನ ಹೆಮ್ಮಗನು ದೇವ
ಸಕಲ ಜೀವರಾಶಿಗಳನು ಕಲ್ಪಿಸುವ ಬೀಜ
ಸುಖದಿಂದ ಮಾಯಾಂಗನೆಯರೊಡಲೊಳು
ಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವ
ಮಕರಾಂಕ ನಿನ್ನ ಕಿರಿಮಗ ದೇವ
ರಾಮನಾಮವ ಜಪಿಸಿ ಪರಮ ವೈಷ್ಣವನಾಗಿ
ಹೇಮಗಿರಿ ಸನಿಹ ಸಾಹಸ್ರನಾಮ
ಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದ
ಸೋಮಶೇಖರನು ನಿನ್ನ ಮೊಮ್ಮಗನು
ಜಂಗಮ ಸ್ಥಾವರಕಾಧಾರವಾಗಿಹಳು
ಭಂಗಪಡುವ ಜನರ ಕರ್ಮವ ಕಳೆವಳು
ಹಿಂಗದೆ ಜಗವ ಪಾವನವ ಮಾಡುವ ಪುಣ್ಯ
ಗಂಗೆಯೆಂಬಾಕೆ ನಿಮ್ಮಯ ಮಗಳು ದೇವ
ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳು
ಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿ
ಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ
ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು
ಇಂತು ಅಣುರೇಣು ತೃಣ ಕಾಷ್ಠದೊಳಗೆಲ್ಲ
ಸಂತೋಷವಾಗಿಹುದು ನಿನ್ನ ಸ್ಮರಣೆ
ಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆ
ಕಂತುಪಿತ ಕಾಗಿನೆಲೆಯಾದಿಕೇಶವನೆ
Music Courtesy:
Video
Transliteration
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ವಿಷಯ -
ಶ್ರೀಹರಿ ಸ್ತುತಿ ಮತ್ತು ಶ್ರೀಲಕ್ಷ್ಮಿ ಸ್ತುತಿ