ಕೀರ್ತನೆ - 363     
 
ಏನೆಂತೊಲಿದೆ ಇಂತವರಂತೆ ಕೆಡುಬುದ್ದಿ - ಎನ್ನೊಳಿಲ್ಲ ಗುಣ | ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿನಿನ್ನೊಳಿಲ್ಲ ತರಳ ಪ್ರಹ್ಲಾದನಂದದಿ ನಿನ್ನಯ ರೂಪ ಕೆಡಿಸಲಿಲ್ಲ ನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ | ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲ ದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ | ಪರಾಶರನಂತೆ ನದಿಯೊಳಂಬಿಗೆ ಹೆಣ್ಣ ಕೂಡಲಿಲ್ಲ || ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲ ಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲ ಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ || ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲ ಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ ಸನಕಾದಿ ಮುನಿಯಂತೆ ಅನುದಿನ ಮನದೊಳು ಸ್ಮರಿಸಲಿಲ್ಲ ಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ | ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲ ಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ ವರ ಶೌನಕನಂತೆ ನಿತ್ಯ ಸೂತನ ಕಥೆ ಕೇಳಲಿಲ್ಲ. ಪಿರಿದು ತುಂಬುರುನಂತೆ ನಾಟ್ಯ - ಸಂಗೀತವ ಪೇಳಲಿಲ್ಲ | ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲ ಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ ಭ್ರಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲ ಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ॥ ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲ. ಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲ ಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ || ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವ ಇವರಂತೆ ಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ