ಪೇಳಲಳವೆ ನಿನ್ನ ಮಹಿಮೆಯ-ಶ್ರೀರಂಗ ಧಾಮ |
ಪೇಳಲಳವೆ ನಿನ್ನ ಮಹಿಮೆಯ
ನೀಲ ಮೇಘಶ್ಯಾಮ ನಿನ್ನ |
ಬಾಲಲೀಲೆಯಾಟ
ವಿಷದ ಮೊಲೆಯ ಪೂತನಿಯ ।
ಅಸುವ ಹೀರಿದ ಶೂರನಾದೆ |
ಉಸಿರಲಳವೆ ನಿನ್ನ ಮಹಿಮೆ ।
ಅಮ್ಮಮ್ಮಮ್ಮಮ್ಮಮ್ಮ ||
ಕೆಸರ ತಿನ್ನಬೇಡೆನುತ ತಾಯಿ |
ಶಿಶುವಿನ ವದನವ ನೋಡಿದಳಾಗ |
ದಶಚತುರ್ಭುವನವ ತೋರಿದ ಬಾಯೊಳ |
ಗಲ್ಲಲ್ಲಲಲ್ಲಲ್ಲಲ್ಲೇ
ಬಾಲಲೀಲೆಯ ಬಂಡಿ |
ಕಾಲಲೊದ್ದು ಶಕಟಾಸುರನ ||
ಮೂಲನಾಶ ಮಾಡಿದೆ ನೀ ।
ನಬ್ಬಬ್ಬಬ್ಬಬ್ಬಬ್ಬ||
ತಾಳಮರದ ನಡುವೆ ಒರಳ |
ಕಾಲಿಗೆ ಕಟ್ಟೆಳೆಯುತಿರಲು |
ಬಾಲ ಸತ್ತನೆಂದು ಗೋಪಿ ಅತ್ತ-1
ಳಯ್ಯಯ್ಯಯ್ಯಯ್ಯಯ್ಯಯ್ಯೊ
ಸಣ್ಣವನಿವನಲ್ಲ ನಮ್ಮ |
ಬೆಣ್ಣೆ ಕದ್ದು ಗೊಲ್ಲರ ಮನೆಯ |
ಹೆಣ್ಣು ಮಕ್ಕಳನು ಹಿಡಿದ ಕಳ್ಳ |
ಎಲ್ಲೆಲ್ಲೆಲ್ಲೆಲ್ಲೆಲ್ಲೆಲ್ಲೆ ||
ನಿನ್ನಾಣೆಯಿಲ್ಲೆಂಬ ರಂಗನ ।
ಬಿನ್ನಾಣಕೆ ನಕ್ಕವರನು ಬಯ್ಯುತ ।
ಎನ್ನ ಕಂದ ಹುಸಿಯನಾಡ |
ನೆಂದೆಂದೆಂದೆಂದೆಂದು
ನಾರಿಯರೆಲ್ಲ ಬತ್ತಲೆಯಾಗಿ |
ನೀರಾಟವನಾಡುತಿರಲು |
ಸೀರೆಗಳೊಯ್ದು ಮರವನೇರಿದ |
ನತ್ತತ್ತತ್ತತ್ತತ್ತತ್ತ||
ವಾರಿಜಮುಖಿಯರು ಲಜ್ಜೆಯ ದೊರೆದು ।
ಸೀರೆಗಳನು ಬೇಡಲವರ
ಮೋರೆ ನೋಡಿ ರಂಗ ನಕ್ಕ |
ಅಬ್ಬಬ್ಬಬ್ಬಬ್ಬಬ್ಬಬ್ಬಬ
ಕಾಡು ಕಿಚ್ಚು ಮುಸುಕಿ ಗೋವ-
ವಾಡಿಯು ಬೆಂದದ್ದು ನೋಡಿ |
ಈಡಿಲ್ಲದ ಉರಿಯ ತೀಡಿದ |
ಅತ್ತತ್ತತ್ತತ್ತತ್ತತ್ತ||
ಬೇಡಿದ ವರಗಳನೀವ |
ಪುರಂದರವಿಠಲನ ಲೀಲೆಯ |
ರೂಢಿಯೊಳೀತನ ಸಮರು ಯಾರು
ಇಲ್ಲಿಲ್ಲಿಲ್ಲಿಲ್ಲಿಲ್ಲಿಲ್ಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ