ಶ್ರೀನಾಥ ಪಾರ್ವತಿ ನಾಥ ಶರಣೆಂಬೆ
ವಾಣಿ ಸರಸ್ವತಿಯ ಭಾರತಿಯ ಬಲಗೊಂಬೆ
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ
ಶ್ರೀನಾಥ ಗಜರಾಜಗೊಲಿದ ಸದ್ಗತಿಯ
ಚಪ್ಪನ್ನ ದೇಶದೊಳಗೆ ಉತ್ತಮವಾಗಿ
ಇಪ್ಪ ಗೌಳಿ ದೇಶದ ರಾಜ ಇಂದ್ರದರ.
ವೈರಾಗ್ಯ ಮೂಡಿ ಭೂಸುರರ ಸೇವಿಸುತ
ನಾರಾಯಣನ ಮನದಿ ನೆನೆದು ಮೈ ಮರೆತ
ಪುತ್ರ ಮಿತ್ರಾದಿ ಬಂಧುಗಳ ವರ್ಜಿಸಿದ
ನಿತ್ಯ ನರಹರಿಯ ಎಡೆಬಿಡದೆ ಚಿಂತಿಸಿದ
ಆನೆ ಕುದುರೆ ರಾಜ್ಯಗಳನೆ ವರ್ಜಿಸಿದ
ತಾನೆ ನದಿಗಿಳಿದು ಸ್ನಾನಾದಿಗಳ ಮಾಡಿ
ಸಂಧ್ಯಾವಂದನೆಗೈ [ದು ಪದ್ಮಾಸನ ಹಾಕಿ
ಚ೦ದಾಗಿ ಧರಿಸಿದ ದ್ವಾದಶ ನಾಮಗಳ
ಇಂದಿರಾ ಪತಿಯ ಧ್ಯಾನದಿ ಅವನಿರುವಾಗ
ಬಂದನಾ ಎಡೆಗೆ ಅಗಸ್ತ್ಯಮುನಿವರೇಣ್ಯ
ಎದ್ದು ತನಗೆ ವಂದಿಸಲಿಲ್ಲವೆಂದೆನುತ
ಕುದ್ದು ಕುಂಜರನಾಗೆಂದು ಶಾಪವಿತ್ತ
ನಂದು ತಪ್ಪುಂಟು ಮಹರ್ಷಿಯೆ ಕಾಪಾಡು
ಮುಂದೆನಗೆ ವಿಶ್ಯಾಪವೆಂದು ಹೇಳೆನಲು
ವಿಷ್ಣು ಚಕ್ರವು ಬಂದು ನಿಮ್ಮ ಸೋಕಿದರೆ
ಆಕ್ಷಣ ವಿಶ್ವಾಪವೆಂದು ಮುನಿ ನುಡಿದ
ಜ್ಞಾನವಡಗಿ ಅಜ್ಞಾನ ವೆಗಳಿಸಿತು
ದಿನಪ ಮುಳುಗಿ ಕತ್ತಲೆ ಆವರಿಸಿದಂತೆ
ಧ್ಯಾನಿಸುತ ಹಿಂದು ಮುಂದಾಗಿ ನಿಂದಿರಲು
ಆನೆಯಾದನು ನೃಪನು ಆ ಕ್ಷಣದಿ ತಾನು
ಮೇಲುಗಿರಿ ಪರ್ವತವೆ ಕದಲಿ ಬಂದಂತೆ
ಮೇಲುಮದ ಕೀಳು ಮದದಿಂದ ಘೀಳಿಟ್ಟು
ಹೆಣ್ಣಾನೆಗಳ ಕೂಡಿ ಸಂತತಿಯ ಪಡೆದು
ಹಣ್ಗೊನೆಗಳ ಮೆದ್ದು ತಣ್ಣನೆಯ ನೀರ್ಕುಡಿದು
ಕಂಡಕಂಡಲ್ಲಿ ಓಡುತಲಿ ಇಳಿಯುತಲಿ
ತುಂಡು ತುಂಡಾಗಿ ಮರಗಳನೆ ಮುರಿಮುರಿದು
ಹಿಂಡು ಹಿ೦ಡಾಗಿದ್ದ ಸತಿ ಸುತರ ಕೂಡಿ
ದಂಡು ದಾಳಿಯನಿಟ್ಟ ತೆರದಿ ಅಂಡಲೆಯೆ
ಬೆಂಡಾಗಿ ಬಾಯಾರಿ ಸುತ್ತಲೂ ನೋಡಿ
ಹೊಂಡ ಕಂಡತ್ತ ಧಾವಿಸಿತು ಸಕಟುಂಬಿ
ಸುತ್ತಮುತ್ತ ಅಶ್ವತ್ಥ ಹೇರಳೆ ಕಿತ್ತಳೆ
ಒತ್ತಾಗಿ ದಾಳಿ೦ಬ ದ್ರಾಕ್ಷಿ ಖರ್ಜೂರ
ಬಾಗಿ ತೂಗುತ್ತ ಫಲವಾದ ಫಲವೆಲ್ಲ
ತೂಗಿ ಕರೆಯುತ್ತ ಮೇಲಾದ ಹೂವೆಲ್ಲ
ಉಲಿವ ಗಿಳಿ ಹಿಂಡುಗಳು ಕುಣಿವ ನವಿಲುಗಳು
ನಲವಿಂದ ಸರಗೈವ ಕೋಗಿಲೆಯ ದಂಡು
ದಂಡೆಯೊಳು ಒಳಗೊಂಡ ತಾವರೆಯ ಕೊಳಕೆ
ಶುಂಡಾಲವಿಳಿದು ನೀರೋಕುಳಿಯನಾಡಿ
ಸೂಂಡಿಲಿಂದಪುಳಿಸುತ ತೊತ್ತಳತುಳಿದು
ಹೊಂಡವನು ಕಲಕಿ ರಣಾ೦ಗಣಗೈದಾಗ
ಆ ಮಡುವಿನಲ್ಲಿದ್ದ ಶಾಪಗ್ರಸ್ತವಹ
ಮಾಮೊಸಳೆಯೊಂದು ಹಿಡಿಯಿತಾನೆಯ ಕಾಲ
ಕಾಲೆತ್ತಲೂ ಬರದು ಕಿತ್ತರೂ ಬರದು
ಆಲಿಟ್ಟುದನು ಕೇಳಿ ಸತಿಸುತರೆಲ್ಲ
ಒಗ್ಗೂಡಿ ಎಳೆದೆಳೆದು ಸೊರಗಿ ಸುಸ್ತಾಗಿ
ಕುಗ್ಗಿ ಕಂಗೆಟ್ಟು ಹಿಮ್ಮೆಟ್ಟಿ ನಿಂತಾಗ
ದೇವರಿಟ್ಟಂತಾಗಲಿ ನೀವು ತೆರಳಿರೆನೆ
ನೋವುಗೊಂಡವು ಬಂದ ದಾರಿಯ ಹಿಡಿದವು
ಇತ್ತ ಆ ಮಕರಿ ಕಚ್ಚುತ್ತ ಕಡಿಯುತ್ತ
ನೆತ್ತರಾಯಿತು ಮಡುವಾದ ಮಡುವೆಲ್ಲ
ಗಜರಾಜ ನನಗಿನ್ನು ದಿಕ್ಕಾರು ಎಂದು
ಅಜಪಿತಗೆ ಮೊರೆಯಿಟ್ಟಿತು ಪರಿಪರಿಯಿಂದ
ಈರೇಳು ಭುವನವನು ಕಾಯುವಾ ದೇವ
ನೀರೊಳಗೆ ಸಾಯುತಿಹೆ ಬದುಕಿಸೋ ಎನ್ನ
ವೇದ ಕದ್ದೊಯ್ದ ದಾನವನ ಛೇದಿಸಿದ
ವೇದವಿದ ಮತ್ಸ್ಯಾವತಾರಿ ಸಲಹೆನ್ನ
ಕಡೆಗೋಲು ಕುಸಿದಾಗ ಹಿಡಿದೆತ್ತಿ ನಿ೦ತ
ದೃಢದೇಹಿ ಕೂರ್ಮಾವತಾರಿ ಸಲಹೆನ್ನ
ಹಿರಣ್ಯಾಕ್ಷನ ಕೊಂದು ಧರಣಿಯನೆ ತಂದ
ವರಾಹಾವತಾರಿಯೆ ಬಂದು ಕಾಯೆನ್ನ
ರಕ್ಕಸನ ಸೀಳಿ ಕರುಳ ಮಾಲೆ ಧರಿಸಿದ
ಬೆಕ್ಕಸಬೆರಗಿನ ನೃಸಿ೦ಹಾವತಾರಿ ಕಾಯೆನ್ನ
ಬಲಿಯ ದಾನವ ಬೇಡಿ ಪಾತಾಳಕೆ ತುಳಿದ
ಕಲಿ ವಾಮನಾವತಾರಿಯೆ ರಕ್ಷಿಸೆನ್ನ
ತಂದೆ ಸಾವಿಂದ ಕ್ಷತ್ರಿಯರ ಕೊಲೆಗೈದ
ತಂದೆ ಪರಶುರಾಮಾವತಾರಿ ಸಲಹೆನ್ನ
ದಶಕ೦ಠನನೆ ಕೊಂದು ಧರಣಿಜೆಯ ತಂದ
ದಾಶರಥಿ ರಾಮಾವತಾರಿ ಸಲಹೆನ್ನ
ವ್ಯಾಳನ ತುಳಿದು ಸೋಳಸಾಸಿರ ಹೆಣ್ಣ-
ನಾಳಿದ ಕೃಷ್ಣಾವತಾರಿ ಕಾಯೆನ್ನ
ಕತ್ತಲೆ ಜಗದ ಕನ್ಯೆಯರ ವ್ರತಗೆಡಿಸಿದ
ಬತ್ತಲೆಯ ಬೌದ್ಧಾವತಾರಿ ಉಳಿಸೆನ್ನ
ಜಗವದುರೆ ಹಯವೇರಿ ದುಷ್ಪರನು ಕೊಂದ
ಮಿಗೆ ಚದುರ ಕಲ್ಕೃವತಾರಿ ಎತ್ತೆನ್ನ
ಕರುಣಾಕರನೆ ಭಕ್ತವತ್ಸಲನೆ ಕಾಯೊ
ಮರೆಯದಿರು ಮಾಧವನೆ ಅಚ್ಯುತಾನಂತನೆ
ಇಂತು ಪ್ರಾಣದ ಹಂಗುದೊರೆದು ಚೀರ್ದಾಗ
ಕಂತುಪಿತ ಕೇಳಿ ಮಂತಾಡಿದಂತಾಗಿ
ಹಾಲ್ಗಡಲ ವಾಸಿ ಹಾವು ಹಾಸಿಗೆ ಬಿಟ್ಟು
ಪಾಲಿಸಲು ಪರಿತಂದ ಗಜೇಂದ್ರನ ಬಳಿಗೆ
ಹರನು ಪಾರ್ವತಿಯೊಡನೆ ವೃಷಭವನೇರಿ
ತ್ವರಿತದಿ೦ ಬಂದರಲ್ಲಿಗೆ ಕಾತರದಿ
ದೇವಾನುದೇವತೆಗಳು ಮುನಿವರೇಣ್ಕರು
ಕಾವನಯ್ಯನ ಹಿಂದೆ ಬಂದರೋಡೋಡಿ
ನಕ್ರನ ಹಲ್ಲು ಮುರಿವಂತೆ ಜಗದೊಡೆಯ
ಚಕ್ರದಲಿಡಲು ಶಾಪ ವಿಮುಕ್ತಿ ದೊರಕಿತು
ಋಷಿ ದೇವಲನ ಶಾಪದಿಂ ಗಂಧರ್ವ
ಋಷಿ ಅಗಸ್ತ್ಯನ ಶಾಪದಿಂ ಪ್ರದ್ಯುಮ್ನ
ಇರ್ವರೂ ವಿಶ್ಯಾಪದಿ ಮೊದಲಂತಾದರು
ಸರ್ವರೂ ಆದಿಕೇಶವನ ಕೊಂಡಾಡಿದರು
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಉದಯ ರಾಗಗಳು