ಕೀರ್ತನೆ - 309     
 
ವಾಸುದೇವಾಯ ನಮೋ ವಾಸುಕಿಶಯನಾಯ ವಾಸವಾದ್ಯಖಿಳ ಮುನಿನಮಿತ ಚರಣಾಂಭೋಜ ಭೂಸುರಪ್ರಿಯ ಭಕ್ತ ಪೋಷಕನೆ ರಕ್ಷಿಪುದು ಕೇಶವ ಮುಕುಂದರೊಲಿದು ಶುಂಡಾಲ ಪುರದೊಳಗೆ ಮರುಳ ದುರ್ಯೋಧನನು ಪಾಂಡುನಂದನರೊಡನೆ ಕಪಟದ್ಯೂತವನಾಡಿ ಗ೦ಡರೈವರ ಮುಂದೆ ದ್ರುಪದ ನಂದಿನಿ ಸೆರಗ ಲಂಡ ದುಶ್ಯಾಸ ಪಿಡಿದು ಅಂಡಲೆದು ಸೀರೆಯನು ಸೆಳೆಯುತಿರೆ ದ್ರೌಪದಿಯು ಕ೦ಡು ಮನದಲಿ ಬೆದರಿ ಪರಮಾತ್ಮ ಪರಿಪೂರ್ಣ ಪುಂಡರೀಕಾಕ್ಷ ರಕ್ಷಿಪುದೆಂದು ಮೊರೆಯಿಟ್ಟಳಂಡಜ ತುರ೦ಗಗಾಗ ಪಾವಕನ ಉರಿಯೊಳಗೆ ಹೊಕ್ಕು ಹೊರಡಲು ಬಹುದು ಹಾವುಗಳ ಹೆಡೆ ಹಿಡಿದು ಎಳೆದೆಳೆದು ತರಬಹುದು ತೀವಿರ್ದ ಮಡುವ ದುಮುಕಲು ಬಹುದು ಗರಳವನು ಸೇವಿಸಬಹುದು ಉರದಿ ಸಾವಿಗಂಜದೆ ಕೊರಳನುತ್ತರಿಸಿಕೊಳಬಹುದು ಜೀವ ಇದ್ದಂತೆ ಲಜ್ಜೆಯನು ತೊರೆಯಲಾರೆನು ಆವ ಪರಿಯಲಿ ನಿನ್ನ ನಂಬಿರುವನಾಥೆಯನು ದೇವ ಅಭಿಮಾನವನು ಕಾಯೊ ಪತಿಗಳೈವರು ಸತ್ಯವ್ರತದಿ ಸುಮ್ಮನೆ ಇಹರು ಅತಿಕ್ಲೇಶ ಪಡುತಿಹರು ವಿದುರ ಭೀಷ್ಮಾದಿಗಳು ಸುತರ ಮೇಲಣ ಮೋಹದಿಂದಂಜಿ ಹೇಳದಿಹ ಗತವಿಲೋಚನ ಮಾವನು ಪತಿಕರಿಸಿಹರು ಶಕುನಿ ಕರ್ಣ ದುರ್ಯೋಧನರು ಹಿತವ ಬಯಸುವರಿಲ್ಲ ನೆರೆದಿರ್ದ ಸಭೆಯೊಳಗೆ ಗತಿಯಿಲ್ಲದರಿಗೆ ಸದ್ಗತಿ ನೀನೆ ನಂಬಿದೆನು ರತಿಪತಿಯ ಪಿತನೆ ಸಲಹೊ ಅತ್ತೆಯಲ್ಲವೆ ಎನಗೆ ಗಾಂಧಾರಿದೇವಿಯರೆ ಮೃತ್ಯುವಂತೆಳೆವವನ ಬಿಡಿಸಬಾರದೆ ತಾಯೆ ಉತ್ತಮಳಲಾ ನೀನು ಭಾನುಮತಿ ನಗೆಹೆಣ್ಣೆ ಇತ್ತ ದಯ ಮಾಡಿ ನೋಡೆ- ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ ಪೆತ್ತುದಿಲ್ಲವೆ ಎನ್ನ ಪೋಲ್ಡ ಪೆಣ್ಮಕ್ಕಳನು ಹತ್ತು ಜನರ ನಡುವಣ ಹಾರ ಸಾಯಲುಬಹುದೆ ತತ್ತ್ವ ಬಾಹಿರರಾದಿರಿ ಆರಿಗೊರಲಿದರೆನ್ನ ದೂರು ಕೇಳುವರಿಲ್ಲ ಪಾರಗಾಣಿಸುವವರ ಕಾಣೆ ನಾನಿವರೊಳಗೆ ಸಾರಿದರೆ ಹೊರೆವ ಕಂಸಾರಿ ನೀನಲ್ಲದಿನ್ನಾರೆನಗೆ ಆಪ್ತ ಬಂಧು ಮಾರಿದರು ಧರ್ಮದೇವತೆಗೆನ್ನ ವಲ್ಲಭರು ಭಾರ ನಿನ್ನದು ಎಂದು ನಂಬಿದ ಅನಾಥಳನು ಕ್ಷೀರದೊಳಗದ್ದು ನೀರೊಳಗದ್ದು ಗತಿ ನೀನೆ ನಾರಾಯಣನೆ ರಕ್ಷಿಸೊ ಅಸುರ ಬೆನ್ನಟ್ಟಿ ಬರೆ ಪಶುಪತಿಯ ರಕ್ಷಿಸಿದೆ ಯಷಿಯ ಶಾಪವ ತರಿದು ಅಂಬರೀಷನ ಪೊರೆದೆ ವಸುಧೆಯೊಳು ಕಲ್ಲಾಗಿ ಬಿದ್ದಹಲ್ಕೆಯ ಕಾಯ್ದೆ ಶಿಶುವು ಪ್ರಹ್ಲಾದಗೊಲಿದೆ ಪಸುಳೆ ಧ್ರುವರಾಯನಿಗೆ ಪೆಸರುಳ್ಳ ಪದವಿತ್ತೆ ದಶಕಂಠನನುಜಗೆ ಸ್ಥಿರ ಪಟ್ಟವನು ಕೊಟ್ಟೆ ಪೆಸರುಗೊಂಡರೆ ಪಸುಳೆ ಅಜಮಿಳನ ರಕ್ಷಿಸಿದೆ ವಸುದೇವ ಸುತನೆ ಸಲಹೊ ಲಕ್ಷ್ಮೀ ಮನೋಹರನೆ ಇಕ್ಷುಚಾಪನ ಸುತನೆ ಯಕ್ಷ ಗಂಧರ್ವಾಮರೇಂದ್ರ ಮುನಿವಂದಿತನೆ ಅಕ್ಷಯ ಸುಲೀಲೆಯಲಿ ಜಗವ ಸೃಜಿಸುತ ಸ್ಥೂಲ ಸೂಕ್ಷದೊಳು ವಿರಾಜಿಪನೆ ಕುಕ್ಷಿಯೊಳಗೀರೇಳು ಜಗವ ಪಾಲಿಸುವವನೆ ಅಕ್ಷಾಸುರಾ೦ತಕಗೆ ಅಜಪದವನಿತ್ತವನೆ ದಕ್ಷಸುತೆಪತಿಸಖನೆ ಪಕ್ಷಿವಾಹನ ಸ್ವಾಮಿ ರಕ್ಷಿಸು ಅನಾಥ ಬಂಧು ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಇಂದೆನ್ನ ಕುಲಸ್ವಾಮಿ ಗುರುಪಿತಾಮಹ ನೀನೆ ಎಂದು ನಂಬಿದ ನನ್ನ ಮಾನಾಭಿಮಾನವ ಮುಕುಂದ ನಿನಗೊಪ್ಪಿಸಿದೆನು ಸಂದೇಹವೇಕೆ ಕೊಂದರೆ ಒಳಿತು ಕಾಯ್ದರೊಳಿ- ತೆಂದೆರಡು ಕಣ್ಣಳ೦ ಮುಚ್ಚಿ ಕರಗಳ ಮುಗಿದು ಇಂದು ಪ್ರಾಣವ ಬಿಡುವೆನೆಂದು ನಿಶ್ಚೈಸಿ ಗೋವಿಂದ ಎಂದೊದರೆ ತರಳೆ ಇಂತೆಂದು ದ್ರೌಪದಿಯ ಮೊರೆಯಿಡುವ ಧ್ವನಿ ಕೇಳಿ ಅ೦ತರಾತ್ಮಕ ಕೃಷ್ಣ ದ್ವಾರಕಾಪುರದೊಳಗೆ ಕಾಂತೆ ರುಕ್ಮಿಣಿ ಸತ್ಯಭಾಮೆಯರ ಕೂಡೆ ಏಕಾಂತ ಭವನದೊಳು ತಿಳಿದು ಕುಂತಿ ನಂದನರ ಸತಿ ಉಟ್ಟುದಕ್ಷಯವಾಗಿ ಸ೦ತಸವಗೊಳಲೆಂದು ವರವಿತ್ತ ಶ್ರೀಕೃಷ್ಣ ಎ೦ತುಟೋ ತನ್ನ ನೆನೆವರ ಮೇಲೆ ಕರುಣವು ಅನ೦ತ ವಸ್ತ್ರಗಳಾದುವು ಸೆಳೆಯುತಿರ್ದನು ಖಳನು ಬೆಳೆಯುತಿರ್ದವು ಸೀರೆ ಬಿಳಿದು ಪೊಂಬಟ್ಟೆ ನಾನಾ ವಿಚಿತ್ರದ ಬಣ್ಣ ಹೊಳಲು ತುಂಬುವ ತೆರದಿ ಎಳೆದೆಳೆದು ಪಾಪಾತ್ಮ ಬಳಲಿ ಇಳೆಯೊಳು ಬಿದ್ದನ ಕಳೆಯಗುಂದಿತು ಮೋರೆ ಕರ್ಣ ದುರ್ಯೋಧನರ ಬಳಿಯೆ ನಿಂದಿರ್ದ ದೂತನ ಕರೆದು ನೇಮಿಸಿದ ತಳುವದೀ ವಸ್ತ್ರಗಳ ಕಳುಹು ಬೊಕ್ಕಸಕೆನಲು ನಳಿನಾಕ್ಷಿ ತಿಳಿದಳಾಗ ಸಿಟ್ಟಿನಲಿ ದ್ರೌಪದಿಯು ಕಣ್ಣೆರೆದು ನೋಡಲಾ ಬೆಟ್ಟದಂತೊಟ್ಟರ್ದ ವಸ್ತ್ರರಾಶಿಗಳೆಲ್ಲ ಸುಟ್ಟಗ್ನಿ ಹೊರಸೂಸಿ ಪಟ್ಟಣದ ಗೃಹವೆಲ್ಲ ನೆಟ್ಟನಾಹುತಿಗೊ೦ಡವು ಕೊಟ್ಟಳಾ ಕಮಲಾಕ್ಷಿ ಕುರುಪತಿಗೆ ಶಾಪವನು ಕಟ್ಟಾಳು ಭೀಮಸೇನನು ರಣದಿ ಗದೆಯಿಂದ ಕುಟ್ಟಿ ಬಿಸುಡಲಿ ನಿನ್ನ ತೊಡೆಗಳೆರಡನೆನ್ನುತ ಇಟ್ಟ ನುಡಿ ತಪ್ಪಲುಂಟೆ ಮೂಡಿದವು ಪ್ರತಿಸೂರ್ಯ ಧೂಮಕೇತುಗಳು ಓ- ಡಾಡಿದವು ಗಗನದೊಳು ಹದ್ದು ಕಾಗೆಗಳು ಕಾ- ದಾಡಿದವು ಮೃಗಜಾತಿ ಚಲಿಸಿದುವು ಶಿಲೆ ಪ್ರತಿಮೆ ರೂಢಿ ಗಡಗಡ ನಡುಗಿತು ಕೂಡಿ ನಕ್ಷತ್ರ ಸೂಸಿದುವು ಬಾ೦ದಳದಿ ಮಾ- ತಾಡಿದವು ಅಶರೀರ ವಾಕ್ಯಗಳು ಪುರಜನರು ಕೇಡು ಕೌರವಗಾಗದಿರದೆಂದು ನಿಶ್ಚೈಸಿ ಓಡಿ ಮನೆಗಳ ಪೊಕ್ಕರು ಹರುಷಪಟ್ಟರು ಮನದಿ ವಿದುರ ಭೀಷ್ಮಾದಿಗಳು ಸುರರು ನಾರದರೆಲ್ಲ ನೆರೆದರಂಬರದಲ್ಲಿ ಹರಸಿ ಜಯಜಯವೆನುತ ದ್ರೌಪದಿಯ ಸಿರಿಮುಡಿಗೆ ಸುರಿಸಿದರು ಪೂಮಳೆಗಳ ಹರಿಯ ನಾಮಾವಳಿಯ ಪೊಗಳುತಲಿ ದಿವಿಜೇಂದ್ರ ತಿರುಗಿ ಹೋದನು ತನ್ನಮರಾವತಿಯರಮನೆಗೆ ಹರಿನಾಮ ನೆನೆವರೇಸು ಧನ್ಕರೊ ದ್ರೌಪದಿಯ ಹರಿನಾಮವೇ ಕಾಯ್ದುದು ಆವನಿದನುದಯ ಕಾಲದೊಳೆದ್ದು ಭಕುತಿಯಲಿ ಭಾವಶುದ್ಧಿಯಲಿ ಹೇಳುವನೊ ಕೇಳುವನೊ ಅವನ- ಘಾವಳಿಯ ಪರಿಹರಿಸಿ ದಿವ್ಯ ಜ್ಞಾನವನೀವೆ ಅವಸಾನ ಸಮಯದಲ್ಲಿ ಶ್ರೀವಾಸುದೇವನಾಜ್ಞಾಪಿಸಿದ ರುಕ್ಮಿಣಿಗೆ ದೇವಿ ಕೇಳನ್ನ ಭಾಷೆಯ ಮುಂದೆ ಅರ್ಜುನಗೆ ನಾವೆ ಸಾರಥಿಯಾಗಿ ಸಲಹುವೆವು ಅವರೆಮ್ಮ ಜೀವ ಪಾಂಡವರೆಂದನು ಮಂಗಳಂ ಶ್ರೀಧರಗೆ ಮಂಗಳಂ ಭೂಧರಗೆ ಮಂಗಳಂ ಮುರಹರಗೆ ಮಂಗಳಂ ನರಹರಿಗೆ ಮಂಗಳಂ ಗರುಡವಾಹನ ಕೃಷ್ಣ ದೇವಂಗೆ ಮಂಗಳಂ ಕರಿವರದಗೆ ಮಂಗಳಂ ತರಳೆಯಭಿಮಾನವನು ಕಾಯ್ದಂಗೆ ಮಂಗಳಂ ಮುನಿಜನರ ಮನದ ಕೊನೆಯಲ್ಲಿಹಗೆ ಮಂಗಳಂ ಕಾಗಿನೆಲೆಯಾದಿಕೇಶವಗೆ ಜಯ ಮಂಗಳಂ ಸಿರಿವರನಿಗೆ