ಪೂಸರನ ಜನಕನೇ ಶತಕೋಟತರಣಿ ಪ್ರ-
ಕಾಶ ಅಗಣಿತ ಕೋಟಿ ಬ್ರಹ್ಮಾಂಡನಾಯಕನೆ
ವಾಸವಮರಾಳಿ ಪರಮೇಷ್ಠಿವಂದಿತ ವೆಂಕ-
ಟೇಶನೊಲಿದುಪ್ಪವಡಿಸಯ್ಯ ಹರಿಯೆ
ಉರ್ವಿಯೊಳು ತಮ ಸಾರಿ ಪ್ರಕಟಿಸುತ ಐದಿರಲು
ಪೂರ್ವಾದ್ರಿಯೊಳು ಪ್ರಭಾಕರನುದಿಸೆ ಹರುಷದಲಿ
ಉರ್ವಿಯಲಿ ಕಮಲಗಳು ಬಾಯ್ದೆರೆಯೆ ಅಭ್ರದಲಿ
ಚೀರ್ವ ಭ್ರಮರಾಳಿ ಎರಗೆ
ಪಾರ್ವ ಖಗ ಉಲಿಯುತಿರೆ ಸಕಲ ಜನ ನಲಿಯುತಿರೆ
ಗೀರ್ವಾಣ ಪತಿ ಅಭವ ಕಮಲಭವರೈದಿಹರು
ಸರ್ವೇಶನೊಲಿದುಪ್ಪವಡಿಸಯ್ಯ ಹರಿಯೆ
ಸುರವಾದ್ಕ ಮೊಳಗಲಂಬುಜಷಂಡ ಬೀಳ್ವಂದದಲಿ
ವರರುದ್ರವೀಣೆಗಳ ಪಿಡಿದು ಸನಕಾದಿಗಳು
ಹರುಷದಲಿ ತ್ರಯದಶದ್ವಯ ರಾಗದಿಂ ಸಪ್ತ
ಸ್ವರದಿ ಪಾಡುತಲೈದಿಹರು ಪರಮ ಕಲ್ಯಾಣಿ
ಸುರನದಿಯು ಯಮುನೆ ಗೌತಮಿಯು
ವರ ಕೃಷ್ಣವೇಣಿ ಭಾಗೀರಥಿಯರೈತಂದು
ಭರದಿ ಹಾರೈಸುತಿಹರು ಜಲಕ್ರೀಡೆಗೇಳಯ್ಯ
ಸ್ಮರನ ಪಿತನೊಲಿದುಪ್ಪವಡಿಸಯ್ಯ ಹರಿಯೆ
ವಿದುರ ಪ್ರಹ್ಲಾದ ರುಕ್ಮಾಂಗದ ವಿಭೀಷಣರು
ಮದಗಜ ಅಜಾಮಿಳ ರುದ್ರ ವರ ಮಾರ್ಕಾಂಡೇಯ
ಕದನದಲಿ ಕಲಿ ಹನುಮ ಸುಗ್ರೀವ ಜಾಂಬವಾಂ
ಗದ ಶಬರಿ ದ್ರೌಪದಿಯರು
ನದಿಸುತನು ಅಕ್ರೂರ ಪಾಂಡವರು ಐವರೂ
ಒದಗಿ ಬಂದಿಹರು ಭಾಗವತ ಜನನಿವಹ ಸುಮನಸ
ಸುದತಿಯರು ರತ್ನದಾರತಿಯ ಬೆಳಗಲೈ-
ದಿದರು ಸರ್ವೇಶನೊಲಿದುಪ್ಪವಡಿಸಯ್ಯ ಹರಿಯೆ
ಶುಕ ವ್ಯಾಸ ದುರ್ವಾಸ ಕುಂಭಸಂಭವರು ಕೌ-
ಶಿಕ ಪರಾಶರ ಅಂಬರೀಶ ಗೌತಮನು ಪೌಂ-
ಡ್ರಿಕನು ವಾಲ್ಮೀಕಿ ಭೃಗು ಕಶ್ಯಪ ವಶಿಷ್ಠಮುನಿ
ನಿಕರವಿದೆ ರಕ್ಷಿಸುವುದೆನುತ
ಮುಖಮಾರ್ಜನವ ಮಾಡಿ ಉದ್ಧರಿಸು ಊರ್ಧ್ವ ಪುಂ-
ಡ್ರಕವನ್ನು ಸಕಲ ಮಧು ಪರ್ಕ ಮೃಷ್ಟಾನ್ನವ ಸುವ-
ರ್ಣಕದ ಹರಿವಾಣದೊಳು ಆರೋಗಣೆಯ ಮಾಡು ರುಕುಮಿಣಿಯರಸನೊಲಿದುಪ್ಪವಡಿಸಯ್ಯ ಹರಿಯೆ
ನುಡಿಯ ಕದ್ದೊಯ್ದವನ ಒರಸಿ ಸುಧೆಯನು ತರಿಸಿ
ಪೊಡವಿಯನು ಧರಿಸಿ ಮನ್ನಿಸಲೈದಿ ಅರ್ಭಕನ
ಅಡಿಯಿಟ್ಟಳೆಯೆ ಭೂಮಿಯನು ಕ್ಷತ್ರಿಯರ ಶಿರವ
ತಡೆಗಡಿಯೆ ರಘುಪತಿ ಕೃಷ್ಣನೆ
ಪೊಡವಿಪತಿ ವೈಕುಂಠವೆನಿಪ ಶೇಷಾದ್ರಿಯೊಳು
ಸಡಗರದಿ ಒಲಿದು ಭಕ್ತರ ಪಾಲಿಪ ನೆಲೆಯಾದಿಕೇಶವನ ಜಗ-
ದೊಡೆಯ ತಿರುವೆಂಕಟೇಶ ಜಗದೀಶ
ಒಡನೆ ಒಲಿದುಪ್ಪವಡಿಸಯ್ಯ ಹರಿಯೆ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಉದಯ ರಾಗಗಳು