ಕೀರ್ತನೆ - 297     
 
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ ಎರಡು ಹೂಳು, ಒಂದು ತುಂಬಲೆ ಇಲ್ಲ ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿ ಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾ ಇಬ್ಬರು ಬ೦ಜಿಯರು, ಒಬ್ಬಾಕಿ ಹಡೆದೇ ಇಲ್ಲ ಹಡೆಯದ ಹೆಣ್ಣ ಕೂಡಿಕೊ೦ಡರು ಮೂವರು ಕುಂಬಾರರು ಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳ ಎರಡು ದದ್ದು, ಒಂದಕೆ ತಳವೆ ಇಲ್ಲ ತಳವಿಲ್ಲದ ಮಡಕಿಗಿ ಕೂಟ್ಜಾರ ಮೂರು ರೊಕ್ಕ ಎರಡು ನಕಲು, ಒಂದು ಸವಕಲು ಸವಕಲು ರೊಕ್ಕದಾಗ ಕುಚ್ಚಲಿಕ ತಂದಾರ ಮೂರ ಕಡುಬ ಎರಡು ಕುದಿಯಲಿಲ್ಲ ಒಂದು ಬೇಯಲಿಲ್ಲ ಬೇಯದ ಕಡುಬಿಗಿ ಬಂದಾರ ಮೂವರು ಬೀಗರ ಇಬ್ಬರು ಬೊಚ್ಚರು, ಒಬ್ಬಗೆ ಹಲ್ಲೇ ಇಲ್ಲ ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿ ಎರಡು ಗೋಟು, ಒಂದು ಸಿಡಿದು ಕಾಣೆಯಾಯಿತು ಕಾಣೆಯಾದ ಅಡಿಕಿಯ ನೋಡಾಕ೦ತ ಹೋಗ್ಯಾರ ಮೂರ ಮಂದಿ ಇಬ್ಬರು ಒಂಚೊರಿ, ಒಬ್ಬಗೆ ಕಣ್ಣೇ ಇಲ್ಲ ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿ ಇಬ್ಬರು ಕು೦ಟರು, ಒಬ್ಬಗೆ ಕಾಲೇ ಇಲ್ಲ ಕಾಲಿಲ್ಲದವನ ಹೊತ್ತು ತರಬೇಕ೦ತ ಹೋಗ್ಯಾರ ಮೂರು ಮಂದಿ ಇಬ್ಬರು ಲಂಡರು, ಒಬ್ಬ ಮೊಂಡ ಕಾಗಿನೆಲೆ ಕನಕದಾಸ ಹಾಕಿದ ಮುಂಡಗಿ ಇದ ತಿಳಿದವ ಜಾಣ. ಒಡೆದು ಹೇಳಿದವ ಕೋಣ