ಕೀರ್ತನೆ - 296     
 
ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು ಮತ್ತೊಂದು ಚೋದ್ಯ ಕೇಳಿ ಚಿತ್ರದ ಹೂವಿನ ಹವಳ ಕಾಯಾಗುವ ಅರ್ಥವ ತಿಳಿದು ಹೇಳಿ ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿ ಬೆಟ್ಟದಿ ಸಾರವನು ತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬ ಹುಟ್ಟು ಬಂಜೆಯ ಮಗನು ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನು ದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲು ಹೆಣನೆದ್ದು ಕುಣಿದಾಡಿತು ಕಣ್ಣಿಲ್ಲದಾತನು ಕಂಡು ಪಿಡಿದ ಮೃಗ ಕೈಯಿಲ್ಲದಾತನೆಚ್ಚ ಮಣ್ಣಲಿ ಹೊರಳುವ ಕಾಲಿಲ್ಲದಾತನು ಗಣ್ಯವಿಲ್ಲದೆ ಪಿಡಿದ ಎಲ್ಲರು ಕೇಳಿ ಕನಕ ಹೇಳಿದ ಮಾತ ಎಲ್ಲರೂ ಗ್ರಹಿಸಿಕೊಳ್ಳಿ ಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತು ಬಲ್ಲಾದಿಕೇಶವನು