ಒ೦ಬತ್ತು ಹೂವಿಗೆ ಒ೦ದೇ ನಾಳವು ಚಂದಮಾಮ
ತು೦ಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ
ಕದರು ಗಾತ್ರ ಕಂಬ ತೆಕ್ಕಗಾತರ ಹೂವು ಚಂದಮಾಮ
ಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ
ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮ
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ
ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮ
ತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ
ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ
ರೊಕ್ಕವಿಲ್ಲದಾತ ಕೊ೦ಡನಾ ಹಣ್ಣ ಚಂದಮಾಮ
ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ
ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ
ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ
ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ
ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮ
ಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ
ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ
ತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಅನುಭಾವದ ನಿಗೂಢ ಮುಂಡಿಗೆಗಳು