ಶ್ರೀರಾಮ ಎನ್ನಿರೊ ಮೂಜಗದವರೆಲ್ಲ
ಈರೇಳು ಭುವನ ತನ್ನುದರದೊಳಿಟ್ಟನ
ಅನಿಮಿಷರಂದದಿ ವನವಾಸಕೆ ಹೋದವನ _ ಶ್ರೀರಾಮ ಎನ್ನಿರೊ
ಮನಸಿಜ ನಾರಿಯ ಪಿತನ ಕೂಂದನ ಪಿತನ ಪೊತ್ತವನ _ ಶ್ರೀರಾಮ ಎನ್ನಿರೊ
ಘನ ಕೋಡ ಕೊನೆಯಿಂದ ಧರಣಿಯ ತಾಳ್ಗವನ _ ಶ್ರೀರಾಮ ಎನ್ನಿರೊ ದಿನಕರನಳಿವಿನಲಿ ಪಗೆಯ ಗೆದ್ದಾತನ _ ಶ್ರೀರಾಮ ಎನ್ನಿರೊ
ಗಜವನೇರಿದವನ ತಂದೆಯ ತಾಯನಳೆದವನ _ ಶ್ರೀರಾಮ ಎನ್ನಿರೊ
ಭುಜಬಲದಿ೦ದ ಭೂಪಾಲರ ಗೆದ್ದವನ _ ಶ್ರೀರಾಮ ಎನ್ನಿರೊ
ನಿಜಮುನಿಗಳ ವನದಿಂದ ತನಯರ ತಂದವನ _ ಶ್ರೀರಾಮ ಎನ್ನಿರೊ
ಜಗಧರನ ಕೈಯ ಆಯುಧವನು ತಂದವನ _ ಶ್ರೀರಾಮ ಎನ್ನಿರೊ
ಪೆಣನ ಭೋಜನ ಮಾಡಿದವರ ವಾಸವ ಹೊಕ್ಕವನ _ ಶ್ರೀರಾಮ ಎನ್ನಿರೊ
ತೃಣಕೆ ಬಾಯಿತ್ತನ ಮೇಲೇರಿ ಬಪ್ಪನ _ ಶ್ರೀರಾಮ ಎನ್ನಿರೊ
ಅಣುರೇಣು ತೃಣದೊಳು ಪರಿಪೂರ್ಣನಾದನ _ ಶ್ರೀರಾಮ ಎನ್ನಿರೊ
ಪ್ರಣವಗೋಚರ ಕಾಗಿನೆಲೆಯಾದಿಕೇಶವನ _ ಶ್ರೀರಾಮ ಎನ್ನಿರೊ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು