ಕೀರ್ತನೆ - 274     
 
ರಾಜವದನೆ ಸುರರಾಜನ ಪುರದೊಳು ರಾಜಿಸುತಿಹ ಕುಜವ ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತ ರಾಜನ ತೋರೆನಗೆ ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮ ನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನ ಕತ್ತಲೆಯೊಳು ಕಾದಿ ಅಳಿದಯ್ಯನ ಶಿರವ ಕತ್ತರಿಸಿದ ಧೀರನ ಸತ್ತ ಮಗನ ತಂದಿತ್ತವನನು ಎ- ನೊತ್ತಿಗೆ ಕರೆದು ತಾರೆ ವರುಷವೈದರ ಪೆಸರವನ ತಾಯನುಜನ ಧರಿಸಿದಾತನ ಸಖನ ಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂ ವರಗೆ ತಾನೊಲಿದವನ ಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿ ಹರಸಿ ದಾನವ ಕೊಂಡನ ಧರಣಿಜಾತನ ಶಿರವರಿದು ನಾರಿಯರನು ಪುರಕೆ ತಂದವನ ತೋರೆ ಹನ್ನೆರಡನೆಯ ತಾರೆಯ ಪೆಸರಾಕೆಯ ಕನ್ನೆಯಯ್ಯನ ಮನೆಯ ತನ್ನ ತಾ ಮರೆ ಮಾಡಿಕೊಂಡಿಪುರಸಿಯ ಬಣ್ಣವ ಕಾಯ್ದಿಹನ ಪನ್ನಗಶಯನ ಬೇಲಾಪುರದರಸನು ತನ್ನ ನೆನೆವ ಭಕ್ತನ ಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ- ಸನ್ನನ ತೋರೆನಗೆ