ರಮಣಿ ಕೇಳೆಲೆ ಮೋಹನ ಶುಭಕಾಯನ
ಅಮರ ವಂದಿತ ರವಿಶತಕೋಟಿ ತೇಜನ
ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನ
ಕಮಲವದನೆ ನೀ ತೋರೆ
ಬಾಯೊಳಗಿಹಳ ಗಂಡನ ನಿಜ ತಮ್ಮನ
ತಾಯ ಪಿತನ ಮಡದಿಯ ಧರಿಸಿದನ
ಸ್ತ್ರೀಯಳ ಸುತನ ಕೈಯಲಿ ಶಾಪಪಡೆದನ
ದಾಯಾದಿಯ ಮಗನ
ಸಾಯಕವದು ತೀವ್ರದಿ ಬರುತಿರೆ ಕಂಡು
ಮಾಯಾಪತಿ ಭೂಮಿಯನೊತ್ತಿ ತನ್ನಯ
ಬೀಯಗನ ತಲೆಗಾಯಿದಂಥ
ರಾಯನ ಕರೆದು ತೋರೆ
ನಾಲಗೆ ಎರಡರವನ ಭುಂಜಿಸುವನ
ಮೇಲೇರಿ ಬಹನ ತಂದೆ ಇಹ ಗಿರಿಯನು
ಲೀಲೆಯಿ೦ದಲಿ ಕಿತ್ತೆಕ್ತಿದ ಧೀರನ
ಕಾಳೆಗದಲಿ ಕೊಂದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವನಾಂತು ತನ್ನವರನು
ಪಾಲಿಸಿದಂಥ ದಾತನಹ ದೇವನ
ಲೋಲೆ ನೀ ಕರೆದು ತೋರೆ
ಉರಿಯೊಳು ಜನಿಸಿದವನ ನಿಜ ತಂಗಿಯ
ಸೆರಗ ಪಿಡಿದ ಖಳನಣ್ಣನ ತಂಗಿಯ
ವರನ ತಲೆಯನು ಕತ್ತರಿಸಿದ ಧೀರನ
ಗುರುವಿನೊಳುದಿಸಿದನ
ಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನ
ಕರೆದು ವರವನಿತ್ತು ಮನ್ನಿಸಿ ಸಲಹುವ
ಉರಗಗಿರಿಯ ವೆಂಕಟಾದಿಕೇಶವನ
ಗರತಿ ನೀ ಕರೆದು ತಾರೆ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು