ಕೀರ್ತನೆ - 264     
 
ಘುಲ್ಲವದನೆ ನಿಲ್ಲಲಾರೆನೆ - ಕಾಮನ ಶರ ತಾಗಿ ತಲ್ಲಣಗೊಳುತಿಹೆನೆ ಬಲ್ಲಿದ ಮಲ್ಲರನೆಲ್ಲ ಮಡುಹಿದ ನಲ್ಲನ ತೋರೆನಗೆ ಮೃಗಧರ ವೈರಿ ವೈರಿಯ ಪೆಗಲೇರಿ ಬರುವಂಥ ಜಗದಾಧಿಪತಿಯಾದನ ಅಗಜೆಯರಸನ ನಗವ ನೆಗಪಿದನ ಬಗೆಯಿ೦ದಪ್ಪಳಿಸಿದನ ಹಗಲೆ ಮೋಹಿಸಿದನ ಮಗನನುಜರೊಳು ಪಗೆಗೊಂಡಿಪ್ಪನ ಮಗುವು ತಾನಾಗಿ ಮಾವನ ಮಸ್ತಕವನು ಬಗೆದನ ತೋರೆನಗೆ ಅಂಧನೃಪಾಲನ ಕ೦ದರನೆಲ್ಲರ ಕೊಂದೆ ವರ ಭಾವನ ತಂದೆಗೆ ಹಿರಿಯನೆಂದೆನಿಸಿಕೊಂಡಾತನ ವಂದಿಸಿದವರಣ್ಣನ ಅಂದು ಸಭೆಯಲಿ ಬಯ್ದವನ ತವಕದಿ ಕಂಧರ ಕಡಿದಾತನ ಸಿಂಧು ಮಥನದೊಳು ಜನಿಸಿದ ಗಂಡ ಮು- ಕುಂದನ ತೋರೆನಗೆ ಮಂಗಳ ಜನನಿಯ ಹಿಂಗದೆ ಕದ್ದು ಜ- ಲ೦ಗಳೊಳಡಗಿಪ್ಪನ ಬೆಂಗೊಂಡು ಪೋಗಿ ಅವನಂಗವ ಸೀಳಿ ವೇ ದಂಗಳ ತಂದವನ ಮಂಗಳ ಮಹಿಮ ಭುಜಂಗ ಶಯನ ನಾರಿ ಭಂಗವ ಕಾಯ್ದವನ ಹಿಂಗದೆ ಕಾಗಿನೆಲೆಯಾದಿಕೇಶವ ನರ ಸಿಂಗನ ತೋರೆನಗೆ