ತೋರೆ ಬೇಗನೆ ಸಖಿ
ತೋರ ಮುತ್ತಿನ ಹಾರ ಭಾರವಾಗಿದೆ ನನಗೆ
ಈರೇಳು ಲೋಕವ ಪೊರೆವ ದಯಾನಿಧಿ
ಬಾರನೇತಕೆ ಮನೆಗೆ ಹೇ ಸಖಿಯೆ
ತರಣಿತನಯಸುತನ ಬಾಯೊಳನೃತವ
ಭರದಿಂದ ನುಡಿಸಿದನ
ತರಣಿಸುತನ ಬಾಣವೆರಗದಂದದಿ ರಥವ
ಧರೆಗೆ ಒತ್ತಿದ ದೇವನ
ತರಣಿಯ ಮರೆಮಾಡಿ ಶಿರವ ತರಿಯುವಂತೆ
ನರಗೆ ಸೂಚಿಸಿದಾತನ
ತರಣಿಯೊಡನೆ ಪಂಥವಾಡಿ ತಿರುಗಿದನ
ತರಳನಾಳಿದನ ತೋರಿಸ ಹೇ ಸಖಿಯೆ
ಗೋತ್ರಭೇದಿ ಸುತನ ಸುತನ ಸತಿಯ
ಮಾತುಳನಾದವನ
ಕತ್ತಲೆಯಲಿ ಪೋಗಿ ಕುತ್ತಿಟ್ಟವನ ಮೈಯ
ಸುತ್ತಿ ಬಾಧಿಸುತಿಪ್ಪನ
ತತ್ತ್ವ ಅರಿತು ಸುತತ್ತ್ವ ಬೋಧಿಸಿ
ಉತ್ತರವಿತ್ತವನ
ಮುತ್ತಯ್ಯನ ತಾಯ ಪೆತ್ತ ದೇವನ ಎನ್ನ
ಹತ್ತಿರ ಕರೆದು ತಾರೆ, ಹೇ ಸಖಿಯೆ
ವರಮುನಿಗಳು ಕೂಡಿ ಸರ್ವೊತ್ತಮನಾರೊ
ಪರಿಶೋಧಿಸಬೇಕೆಂದು
ಭರದಿಂದ ಭ್ರುಗು ಮುನಿ ಬಂದು ಕೋಪಿಸೆ ಬೇಗ
ಚರಣವನೊತ್ತಿದನ
ಪರಿಪರಿಯಲಿ ದೇವ ಪರಮ ಭಕ್ತರ ಕಾವ
ಸುರರಿಗಭಯವಿತ್ತನ
ವರವೇಲಾಪುರದಾದಿ ಕೇಶವನ
ಮರೆಯಲಾರೆನೆ ಮನದಿ - ಹೇ ಸಖಿಯೆ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು