ಏಣನಯನೆ ಏಣಭೋಜ ಮಧ್ಯಳೆ ತೋರೆ
ಏಣಾಂಕ ಬಿಂಬ ಮುಖಿ
ಏಣವೈರಿಯ ವೈರಿಯ ಶಿರಕುಚಯುಗೆ ಕರೆತಾರೆ
ಏಣಾಂಕಧರ ಸಖನ
ಚಳಿಯ ಮಗಳ ತಾಯಳಿಯನ ತನಯನ
ಇಳುಹದೆ ಪೊತ್ತಿಹನ
ಬಳಿದುಣ್ಣಲೀಸದೆ ಸೆಳೆದುಂಡನಣ್ಣನ
ಸಲಹಿದಾತನ ಸುತನ
ಕಳದೊಳು ತಲೆ ಚೆಂಡಾಡಿದ ಧೀರನ
ಬಳಿ ವಾಘೆಯನು ಪಿಡಿದನ
ಇಳೆಯ ಮೊರೆಯನು ಕೇಳಿ ಖಳರುತ್ತಮಾಂಗವ
ನಿಳುಹಿದಾತನ ತೋರೆಲೆ
ಇಪ್ಪತ್ತುನಾಲ್ಕು ನಾಮಗಳೊಳಗೇಳನು
ತಪ್ಪದೆಣಿಸಿ ಕಳೆದು
ಬಪ್ಪ ಎ೦ಟನೆಯ ನಾಮದ ಪೆಸರಿನೊಳ್
ಇಪ್ಪ ಕಡೆಯ ಬೀಡಲಿ
ಅಪ್ಪ ಜಯದರಸನ ಕೂಡೆ ಜನಿಸಿದ
ಕಪ್ಪು ವರ್ಣದ ಮೈಯಳ
ಅಪ್ಪನ ಮಿತ್ರನ ಮಗನೆಂಬ ಬೊಮ್ಮನ
ಬೊಪ್ಪನ ತೋರೆನಗೆ
ಬಿಡುಗಣ್ಣ ಬಾಲೆ ತನ್ನೊಡೆಯನ ನುಡಿಗೇಳಿ
ದೃಢದಿಂದ ನಡೆದು ಬಂದು
ಜಡಿವ ಕೋಪಕೆ ಶಾಪ ಪಡೆದುಕೊಂಡಾಕ್ಷಣ
ನುಡಿದ ದಿನವು ದಾಟಲು
ಪಡೆಯನೆಲ್ಲವ ನಡು ರಣದಲಿ ಸೋಲಿಸಿ
ಜಡಿದು ಗೋವುಗಳನೆಲ್ಲ
ಒಡನೆ ತನ್ನಯ ಪುರಕೆ ಹೊಡೆತ೦ದ ಧೀರನ
ಒಡೆಯನ ತೋರೆನಗೆ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು