ನೀನೇನು ಮಾಡಲಾಪೆ
ನಾನು ಮುನ್ನ ಜನ್ಮ ಪಡದಲ್ಲದೆ ರಂಗ
ನಾನಾ ಜನುಮದಿ ಬಹು ಯೋನಿ ಮುಖದಲಿ ಬಾಹ
ಹೀನತ್ವವನು ನೀನು ಕಳೆಯಲಾಪೆಯ
ನಾನು ನನ್ನದು ಎಂಬ ಅಹಂಕಾರವಿರೆ ನಿನ್ನ
ಧ್ಯಾನಿಸಲು ಬುದ್ಧಿಯ ಕೊಡಲಾಪೆಯ
ಸಂಚಿತವಾಗಿರುವ ಪ್ರಾರಬ್ಧದೊಳಗೊಂದು
ಕಿಂಚಿತಾದರೂ ನೀನು ಕಳೆಯಲಾಪೆಯ
ಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆದಾಗ
ವಂಚನೆ ಇಲ್ಲದೆ ನೀನಡ್ಡ ಬರಲಾಪೆಯ
ಸರಸಿಜೋದ್ಬವಗೆ ಬುದ್ದಿಯ ಪೇಳಿ ಪಣೆಯೊಳು
ಬರೆದ ಬರೆಹವನು ನೀನು ತೊಡೆಯಲಾಪೆಯ
ಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನ
ಸ್ಮರಣೆಗೈಯಲು ಕಾಯದಿರಲಾಪೆಯ