ತನ್ನ ಪ್ರಾಪ್ತಿಯ ಫಲವ ತಾನರಿಯದೆ
ಇನ್ನು ನುಡಿವುದು ಮೂರ್ಖತನವಲ್ಲದೆ
ಸರಸಿಜೋದ್ಬವನು ಫಣೆಯೊಳು ಬರೆದು ನಿರ್ಮಿಸಿದ
ತೆರನೊಂದು ಬೇರುಂಟೆ ತಾನರಿಯದೆ
ಕೆರಕೊಂಡು ಕಂಡವರ ಕೂಡೆ ತಾನಾಡಿದರೆ
ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ
ಬಡತನವು ಬಂದಲ್ಲಿ ಬಾಯಿ ಬಿಟ್ಟರೆ ಮುನ್ನ
ಪಡೆದಂಥ ವಿಧಿ ಬೆನ್ನ ಬಿಡಲರಿವುದೆ
ಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ
ಬಡತನವು ತಾ ಬಿಟ್ಟು ಕಡೆಗೆ ಕದಲುವುದೆ
ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆ
ನೊಸಲ ಬರೆಹವ ತೊಡೆದು ತಿದ್ದಲಳವೆ
ವಸುಧೇಶ ಕಾಗಿನೆಲೆಯಾದಿಕೇಶವಸನಂಫ್ರಿ
ಬಿಸಜವನು ಕಂಡು ನೀ ಸುಖಿಯಾಗು ಮನುಜ