ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ - ಜಗ
ದೇಕ ವಿಖ್ಯಾತ ಪಶ್ಚಿಮ ರಂಗಧಾಮ
ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತು
ರಮಣಿ ಭೂಮಿಯನು ತಂದಾಯಾಸವೂ
ಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊ
ಕ್ಷಮೆಯನಳೆದೀ ಪಾದಕಮಲ ನೊ೦ದವೊ
ಪೊಡವಿಪಾಲಕರ ವಂಶವನು ವಪನ ಮಾಡಿ
ಕೊಡಲಿಯನು ಬಿಸುಟು ಮಲಗಿದ ಭಾವವೊ
ಮಡದಿಯನು ಕದ್ದೊಯ್ದವನ ಶಿರವನೆ ತರಿದು
ಒಡಲಿನಾಯಾಸದಲಿ ಪವಡಿಸಿದ ಪರಿಯೋ
ವಾಲಿ ಮೊದಲಾದ ಎದುರಾಂತ ವೀರರ ಕೊಂದು
ಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊ
ಲೀಲೆಗೋಸುಗ ಬಂದು ನಿರ್ವಾಣದಲಿ ನಿಂದು
ಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ
ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿ
ಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊ
ಸಾಕಾರಿಯಾಗಿ ಗೌತಮ ಮುನೀಶ್ವರನಿಗೆ
ಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ
ಇನ್ನಷ್ಟು ಕಾಲ ನೀನಿಲ್ಲಿ ಮಲಗಿದ್ದರೂ
ನಿನ್ನನೆಬ್ಬಿಸುವವರನೊಬ್ಬರನು ಕಾಣೆ
ಉನ್ನಂತ ಕಾಗಿನೆಲೆಯಾದಿಕೇಶವರಾಯ
ಚೆನ್ನ ಶ್ರೀರಂಗಪಟ್ಟಣದ ರಂಗಧಾಮ
Music
Courtesy:
ಸ್ಥಲ -
ವಿಷಯ -
ದಶಾವತಾರದ ಲೀಲೆಗಳು