ಕೀರ್ತನೆ - 235     
 
ನಿನ್ನ ನಾನೇನೆಂದೆನೊ - ರಂಗಯ್ಯ ರಂಗ ನಿನ್ನ ನಾನೇಂದೆನೊ ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ ಪನ್ನಗಶಯನ ಪಾಲ್ಲಡಲೊಡೆಯನೆ ರಂಗ ಧೀರ ಸೋಮಕ ವೇದಚೋರ ಖಳನನು ಸೀಳಿ ವಾರಿಧಿಗಿಳಿದು ಪರ್ವತವನೆತ್ತಿ ಧಾರಿಣಿಯನು ಕದ್ದ ದನುಜದಲ್ಲಣನಾದ ನಾರಸಿಂಹ ನಿನಗೆ ನಮೊ ಎಂದೆನಲ್ಲದೆ ನೀರ ಪೊಕ್ಕವನೆಂದೆನೆ - ಬೆನ್ನಲಿ ಘನ್ನ ಭಾರ ಪೊತ್ತವನೆಂದೆನೆ - ಮಣ್ಣಗೆದು ಬೇರ ಮೆದ್ದವನೆಂದೆನೆ - ರಕ್ಕಸನೊಳು ಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿ ಪರಶು ಪಿಡಿದು ಕ್ಷತ್ರಿಯರ ಸವರಿ ಚರಣದಿ ಪಾಷಾಣ ಪೆಣ್ಣು ಮಾಡಿದ ಪುಣ್ಯ ಚರಿತ ಯಾದವ ಪತಿ ಶರಣೆಂದೆನಲ್ಲದೆ ತಿರುಕ ಹಾರುವನೆಂದೆನೆ - ಹೆತ್ತ ತಾಯ ಶಿರವ ತರಿದನೆಂದೆನೆ - ವನವಾಸಕೆ ಭರದಿ ಚರಿಸಿದನೆಂದೆನೆ - ಪೂತನಿಯನು ಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ ಚಿತ್ತಜಕೋಟಿ ಲಾವಣ್ಯ ಮುಪ್ಪುರದ ಉತ್ತಮಸ್ತ್ರೀಯರ ವ್ರತವಳಿದು ಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದ ಹತ್ತವತಾರದ ಹರಿಯೆಂದೆನಲ್ಲದೆ ಬತ್ತಲೆ ನಿಂತವನೆಂದೆನೆ - ತೇಜಿಯನೇರಿ ಒತ್ತಿ ನಡೆದವನೆಂದೆನೆ - ಬಾರಿಬಾರಿಗೆ ಸತ್ತು ಹುಟ್ಟುವನೆಂದೆನೆ - ಆದಿಕೇಶವ ಭಕ್ತವತ್ಸಲನೆಂದು ಪೊಗಳಿದೆನಲ್ಲದೆ