ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ,
ನೋಡ ಬನ್ನಿರೆ
ಕೆಂಗಣ್ಣ ಮೀನನಾಗಿ ನಮ ರಂಗ
ಗುಂಗಾಡು ಸೋಮನ ಕೊಂದಾನ್ಮ್ಯಾ
ಗುಂಗಾಡು ಸೋಮನ ಕೊಂದು ವೇದವನು
ಬಂಗಾರದೊಡಲನಿಗಿತ್ತಾನ್ಮ್ಯಾ
ದೊಡ್ಡ ಮಡುವಿನೊಳಗೆ ನಮ ರಂಗ
ಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾ
ಗುಡ್ಡವ ಹೊತ್ಕೊಂಡು ನಿಂತು ಸುರರನು
ದೊಡ್ಡವರನ್ನ ಮಾಡ್ಯಾನ್ಮ್ಯಾ
ಚೆನ್ನ ಕಾಡಿನ ಹಂದಿಯಾಗಿ ನಮ ರಂಗ
ಚಿನ್ನದ ಕಣ್ಣನ ಕೊಂದಾನ್ಮ್ಯಾ
ಚಿನ್ನದ ಕಣ್ಣನ ಕೊಂದು ಭೂಮಿಯ
ವನಜಸಂಭವಗಿತ್ತಾನ್ಮ್ಯಾ
ಸಿಟ್ಟಿಂದ ಸಿ೦ಹನಾಗಿ ನಮ ರಂಗ
ಹೂಟ್ಟೆಯ ಕರುಳ ಬಗೆದಾನ್ಮ್ಯಾ
ಹೊಟ್ಟೆಯ ಕರುಳ ಹಾರವ ಮಾಡಿ
ಪುಟ್ಟಗೆ ವರವ ಕೊಟ್ಟಾನ್ಮ್ಯಾ
ಹುಡುಗ ಹಾರುವನಾಗಿ ನಮ ರಂಗ
ಬೆಡಗಲಿ ಮುಗಿಲಿಗೆ ಬೆಳದಾನ್ಮ್ಯಾ
ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನ
ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ
ತಾಯ ಮಾತನು ಕೇಳಿ ಸಾಸಿರ ತೋಳಿನ
ಆವಿನ ಕಳ್ಳನ ಕೊಂದಾನ್ಮ್ಯಾ
ಆವಿನ ಕಳ್ಳನ ಕೊಂದು ಭೂಮಿಯ
ಅವನಿಸುರರಿಗೆ ಇತ್ತಾನ್ಮ್ಯಾ
ಪಿಂಗಳ ಕಣ್ಣಿನ ಕೊ೦ಗಗಳ ಕೂಡಿ
ಛಂಗನೆ ಲಂಕೆಗೆ ಪೋದಾನ್ಮ್ಯಾ
ಛಂಗನೆ ಲಂಕೆಗೆ ಪೋಗಿ ನಮ ರಂಗ
ಹೆ೦ಗಸುಗಳ್ಳನ ಕೂಂದಾನ್ಮ್ಯಾ
ಕರಿಯ ಹೊಳೆಯ ಬಳಿ ತುರುಗಳ ಕಾಯುತ
ಉರಗನ ಮಡುವ ಧುಮುಕ್ಕಾನ್ಮ್ಯಾ
ಉರಗನ ಹೆಡೆ ಮೇಲೆ ಹಾರಾರಿ ಕುಣಿವಾಗ
ವರವ ನಾರೇರ್ಗೆ ಕೊಟ್ಟಾನ್ಮ್ಯಾ
ಭಂಡನಂದದಿ ಕುಂಡೆಯ ಬಿಟುಗೊಂಡು
ಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾ
ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರ
ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ
ಚೆಲುವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆ ರಾಹುತನಾದಾನ್ಮಾ
ಒಳ್ಳೆ ರಾಹುತನಾಗಿ ಮ್ಲೇಚ್ಛರ
ಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ
ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನು
ತಾಳವ ಶಿವನಪ್ಪ ತಟ್ಟಾನ್ಮ್ಯಾ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ಮ್ಯಾ
Music
Courtesy:
ಸ್ಥಲ -
ವಿಷಯ -
ದಶಾವತಾರದ ಲೀಲೆಗಳು