ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ
ಹೆಚ್ಚಿದ ತಮನೆಂಬ ದನುಜ ವೇದವ ಕದ್ದು
ಬಚ್ಚಿಟ್ಟು ನೀರೊಳು ಮುಳುಗಿರಲು
ಮಚ್ಚ ರೂಪದಿಂದ ಪೋಗಿ ಅವನ ಕೊಂದ
ಅಚ್ಯುತರಾಯನೆಂಬ ಮಾಸಾಳಮ್ಮ
ಸಿ೦ಧು ಮಥನವ ಮಾಡೆ ಅಮರರೆಲ್ಲರು
ಮಂದರಗಿರಿ ನೀರೊಳು ಮುಳುಗಲು
ಚಂದದಿ ಕೂರ್ಮ ರೂಪಿನಿಂದೆತ್ತಿದ ಗೋ-
ವಿಂದನೆಂಬುವ ಮಾಸಾಳಮ್ಮ
ರೂಢಿಯ ಕದ್ದುಕೊಂಡೋಡುವ ದೈತ್ಯನ
ನೀಡಿ ತಿವಿದು ಕೋರೆದಾಡೆಯಿಂದ
ದೂಡಿ ಧ್ವಂಸವ ಮಾಡಿ ರೂಢಿಯ ತಂದ
ಕಾಡು ವರಾಹ ರೂಪಿ ಮಾಸಾಳಮ್ಮ
ಲೇಸು ತಪ್ಪಿದನೆಂದು ಹಿರಣ್ಯಕ ತನಯನ
ಘಾಸಿ ಮಾಡಲು, ಕಂಬ ಒಡೆದುದಿಸಿ
ರೋಷದಿ ದೈತ್ಯನ ಕರುಳ ಕಿತ್ತ ನರ
ಕೇಸರಿ ರೂಪಿನ ಮಾಸಾಳಮ್ಮ
ಆ ಮಹಾಸಿರಿಯ ಗರ್ವದಿ ಮುಂದರಿಯದೆ
ಭೂಮಿಯನು ಬಲಿ ತಾನಾಳುತಿರೆ
ನೇಮಿಸಿ ಎರಡೇ ಹೆಜ್ಜೆಯೊಳಳಕೊಂಡ
ವಾಮನ ರೂಪಿನ ಮಾಸಾಳಮ್ಮ
ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನ
ಮಹಾಮುನಿಯ ಪ್ರಾಣಕೆ ಮುನಿಯ
ತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದ
ರಾಮ ಭಾರ್ಗವನೆಂಬ ಮಾಸಾಳಮ್ಮ
ಜನಕ ಸುತೆಯನು ಕದ್ದೊಯ್ಯಲು ಲಂಕೆಗೆ
ಗಣಿತಾತೀತ ಶರಧಿಯ ಕಟ್ಟಿ
ಘನ ಕೋಪದಿ ದಶಿಶಿರನ ಕತ್ತರಿಸಿದ
ಇನಕುಲ ರಾಮನೆಂಬ ಮಾಸಾಳಮ್ಮ
ದೇವಕಿ ಬಸುರೊಳು ಬಂದು ಗೋಕುಲದಿ
ಆವ ಕಾವ ಗೊಲ್ಲರ ಸಲಹಿ
ಮಾವನ ಕೊಂದು ಮತ್ತೈವರ ಸಲಹಿದ
ದೇವ ಕೃಷ್ಣನೆಂಬ ಮಾಸಾಳಮ್ಮ
ಪತಿವ್ರತೆಯರ ವ್ರತವಳಿಯಬೇಕೆನುತಲಿ
ಅತಿಶಯದಿ ತ್ರಿಪುರದ ಸ್ತ್ರೀಯರ
ನುತ ಬೌದ್ಧ ರೂಪದಿ ಬಹು ಭಂಗಪಡಿಸಿದ
ರತಿಪತಿಪಿತನೆಂಬ ಮಾಸಾಳಮ್ಮ
ಖುಲ್ಲ ಮನುಜರನು ಕೊಲ್ಲಬೇಕೆನುತಲಿ
ಭಲ್ಲೆ ಹಿಡಿದು ತುರಗವನೇರಿ
ಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದ
ಬಲ್ಲಿದ ಕಲ್ಕಿಯೆ೦ಬ ಮಾಸಾಳಮ್ಮ
ಮಂಗಳ ಮಹಿಮ ಭುಜ೦ಗ ಶಯನ ಕಾ
ಳಿ೦ಗ ಮರ್ದನ ದೇವೋತ್ತುಂಗ
ಅಂಗಜಪಿತ ನೆಲೆಯಾದಿಕೇಶವ ಅಂತ
ರಂಗದೊಳಿರುವ ಮಾಸಾಳಮ್ಮ
Music
Courtesy:
ಸ್ಥಲ -
ವಿಷಯ -
ದಶಾವತಾರದ ಲೀಲೆಗಳು