ಕೀರ್ತನೆ - 225     
 
ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಸೈಯ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಸಂಜೆಯ ವೇಳೆಗೆ ಬಂದು - ಸಟೆಯಲ್ಲ - ಮನೆಯ ಒಳಗಡೆ ನಿಂದು ಕು೦ಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದ ಗ೦ಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆ ಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು ಬಿಟ್ಟ ಮಂಡೆಯಲಿ ಗಂಡ ಮೈ ಮರೆತು ಮಲಗಿಹುದ ಕಂಡು ಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದ ಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿ ಥಟ್ಟನೇಳಲು ಗ೦ಡ, ಜುಟ್ಟು ಕಿತ್ತು ಹೋಯಿತಮ್ಮ ಅಡವಿ ಜಟ್ಟಿಂಗನ ಮಾಡಲಿಕೆ ಒಳ್ಳೆ ಸಡಗರ ಸಂಭ್ರಮದಿಂದ ಹೆಡಗೆ ತುಂಬ ಹೋಳಿಗೆ ಮಾಡಿ ಕೊಡ ನೀರು ತರಲು ಹೋದೆನೆ ಕಡೆಗೊಂದು ಹೋಳಿಗೆ ಬಿಡದೆ ಕೊಡದುಪ್ಪ ಹಾಲ್ಮೊಸರು ಪಾಯಸ ಕಡು ಫಟಿಂಗ ತುಡುಗು ತಿಂದು ಮೀಸಲಳಿದು ಎಡೆಗೆಡಿಸಿ ಹೋದನೆ ಊರೊಳಿಂತಾಯ್ತೆಂದು ಸಾರಿದೆವೆ ನಾರೇರು ಅಡವಿಯಲಿ ಕೂಡಿದೆವೆ ಹಲವಾರು ಹೆಂಗಸರು ನೂರಾರು ಗೆಳತೇರು ಉಳಿದ ಹಾಲನು ಮಾರಿ ದಾರಿ ಹಿಡಿದು ಬರುವಾಗೊಂದು ಕೊಳವ ಕಂಡೆವೆ ನೊಡು ಓರಗೆ ಹೆ೦ಗಳು ನಾವು ನೀರಾಟವಾಡಲಿಕೆ ಸೀರೆ ಕುಬಸವ ದಡದೊಳಿಟ್ಟು ಕೊಳಕೆ ಧುಮುಕಿದೆವೆ ಚೋರ ನಿನ್ನ ಮಗ ಸೀರೆಕುಬಸವನೆಲ್ಲ ತಕ್ಕೊಂಡು ಹೋಗಿ ತೋರದುಂಚ ಕಡಹದ ಮರನೇರಿ ನೋಡುತ ಕುಂತನೆ ನೆಟ್ಟನೆ ನೀರಾಟವಾಡಿ ನಾಲ್ಕೂ ದಿಕ್ಕಿನಲಿ ನಾವು ಅಡರಿದೆವೆ ಇಟ್ಟಲ್ಲಿ ಸೀರೆಕುಬಸಗಳಿಲ್ಲ ಕೆಟ್ಟೆವಯ್ಯಯ್ಯೋ ಕಿಟ್ಟನ ಕೈಚಳಕವೆ೦ದು ನಾವಷ್ಟದಿಕ್ಕುಗಳ ನೋಡಿದೆವೆ ತುಟ್ಟತುದಿ ಕೊ೦ಬೆಯಲಿ ಕುಂತಿರುವ ಪುಟ್ಟನ್ನ ಕಂಡೆವೆ ಮುಂದೆ ಹಸ್ತದಿ ಮುಚ್ಚಿಗೊಂಡು ಕೃಷ್ಣನಿಗೆ ಗೋಗರೆದು ಕೇಳಲು ವಂದನೆ ಮಾಡಿದರೆ ನಿಮಗೆ ಸೀರೆ ಕುಬಸವ ಕೊಡುವೆನೆಂದ ಒಂದು ಕರದಿ ಮುಗಿವೆವೆಂದರೆ ಎರಡು ಕರದಿ ಮುಗಿಯಿರೆಂದ ಬ೦ಧನಕ್ಕೊಳಗಾದೆವೆಂದು ವಿಧಿಯಿಲ್ಲದೆ ಮುಗಿದೆವೆ ಪುಷ್ಪಗ೦ಧಿಯರೆ ಒಪ್ಪಿತವಾಗಲಿಲ್ಲ ನನ್ನ ಮನಕೆ ಚಪ್ಪಾಳೆ ಇಕ್ಕುತ ಮರದ ಸುತ್ತ ತಿರುಗಿರೆಂದ ತಪ್ಪದು ಎಷ್ಟೊತ್ತಾದರು ಬಿಡನೆಂದು ಜಯಜಯವೆನುತ ಚಪ್ಪಾಳೆ ಇಕ್ಕುತ ಮರದ ಸುತ್ತಲೂ ತಿರುಗಿದೆವೆ ಪಗಡೆಕಾಯಿ ಕುಚದ ದಗಡಿಯರೆ ಪುಗಡಿ ಹಾಕಿರಿ ಎನ್ನೆದುರು ತೆಗೆದು ಕೊಡುವೆ ನಿಮ್ಮ ವಸ್ತ್ರಗಳ ಬಗೆಬಗೆಯಿ೦ದ ಜಗದೊಳು ನಗೆಗೇಡಾದೆವು ಇನ್ನು ನುಡಿದು ಫಲವಿಲ್ಲೆಂದು ಪುಗಡಿ ಹಾಕಿದೆವೆ ನಾವು ಛೀ ಛೀ ಎನ್ನುತಲಿ ಕಡೆಯಾಟ ಕಮಲನೇತ್ರೆಯರೆ ಎಡೆಯಾಗಿ ಹೋಗಿ ನಿಲ್ಲಿರಿ ಓಡಿಬಂದರೊಂಟಿಯಾಗಿ ಹಿಡಿದು ನೋಡಿ ಕೊಡುವೆ ಎಂದ ಕೋಡಗ ಕೊರವಂಗೆ ಸಿಕ್ಕಿ ಆಡಿದಂತೆ ನಾವಾಡಿದೆವೆ ಓಡಿ ಬಂದೊಬ್ಬೊಬ್ಬರಿಗೂ ಹಿಡಿದು ಸವರಿ ವಸ್ತವನಿತ್ತನೆ ತಂಡತಂಡದ ನಮಗೆ ಬಣ್ಣಬಣ್ಣದ ಬಳೆಯನಿಟ್ಟು ಮಂಡೆ ಬಾಚಿ ಕುರುಳ ತಿದ್ದಿ ಕುಂಕುಮವಿಟ್ಟನೆ ಪುಂಡ ನಿನ್ನಣುಗ ನೆಲೆಯಾದಿಕೇಶವರಾಯ ಬಂಡು ಮಾಡಿ ಬಳಲಿಸಿ ಕೊನೆಗೆ ರಮಿಸಿ ಕಳಿಸಿಕೊಟ್ಟನೆ