ಮಗನೆಂದಾಡಿಸುವಳು ಮೊಗ ನೋಡಿ ನಗುವಳು
ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು
ಕಾಲಲಂದುಗೆ ಗೆಜ್ಜೆ ತೋಳ ಮಣಿಯ ದಂಡೆ
ಫಾಲದ ಅರಳೆಲೆಯು ಕುಣಿಯೆ
ನೀಲದುಡುಗೆಯುಟ್ಟ ಬಾಲನೆ ಬಾರೆಂದು
ಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ
ಬಣ್ಣ ಸರವಲ್ಲಾಡೆ ವರ ರನ್ನ ನೇವಳದ
ಹೊನ್ನ ಗಂಟೆಯು ಘಣ ಘಣರೆನಲು
ಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದು
ಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ
ಪೊಡವಿಯ ಈರಡಿ ಮಾಡಿದ ದೇವನ
ಕುಡಿಬೆರಳನೆ ಕರದಲಿ ಪಿಡಿದು
ಅಡಿಯಿಡು ಮಗನೆ ಮೆಲ್ಲಡಿಯಿಡು ಎನುತಲಿ
ನಡೆಗಲಿಸುವ ಪುಣ್ಯವೆಂತು ಪಡೆದಳಯ್ಯ
ಕುಕ್ಷಿಯೊಳು ಈರೇಳು ಜಗವನ್ನು ಸಲಹುವನ
ರಕ್ಷಿಪರು ಉಂಟೆ ತ್ರೈಜಗದೊಳಗೆ
ಪಕ್ಷಿವಾಹನ ನೀನು ಅ೦ಜಬೇಡ ಎನುತಲಿ
ರಕ್ಷೆ ಇಡುವ ಪುಣ್ಯವನೆಂತು ಪಡೆದಳಯ್ಯ
ಶಂಖ ಚಕ್ರ ಗದಾ ಪದುಮಧಾರಕನ
ಪಂಕಜ ಮಿತ್ರ ಶತಕೋಟಿ ತೇಜನ
ಸಂಖ್ಯೆಯಿಲ್ಲದಾಭರಣಗಳ ತೊಡಿಸಿಯ
ಲಂಕರಿಸುವ ಪುಣ್ಯವೆಂತು ಪಡೆದಳಯ್ಯ
ಸಾಗರಶಯನನ ಭೋಗೀಶನ ಮೇಲೆ
ಯೋಗ ನಿದ್ರೆಯೊಳಿಪ್ಪ ದೇವನನು
ಆಗಮ ನಿಗಮಗಳರಸಿ ಕಾಣದ ವಸ್ತುವನು
ತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ
ಪನ್ನಗ ಶಯನನ ಉನ್ನಂತ ಮಹಿಮನ
ಸನ್ನುತ ಭಕುತರ ಸಲಹುವನ
ಪನ್ನಗಾರಿ ವಾಹನ ದೇವರ ದೇವನಹ
ಚೆನ್ನಾದಿಕೇಶವನನೆಂತು ಪಡೆದಳಯ್ಯ
Music
Courtesy: