ನೆರೆದು ಗೋಪಿಯರೆಲ್ಲರು - ಕೃಷ್ಣಯ್ಯನ
ಕರವ ಪಿಡಿದುಕೊಂಡು
ಭರದಿಂದ ಬಂದು ಯಶೋದೆಗೆ ಚಾಡಿಯ
ಅರುಹಿದರತಿ ವೇಗದಿ
ಬಲು ಕಳ್ಳ ನಿನ್ನ ಮಗ - ಯಶೋದೆ ಕೇಳೆ
ಹಾಲು ಕರೆಯುತಿರಲು
ತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನು
ನೆಲುವಿನ ಪಾಲ್ಮೊಸರ
ಅಮ್ಮಯ್ಯ ಇಲ್ಲ ಕಾಣೆ - ಇವಳು ಎನ್ನ
ಸುಮ್ಮನೆ ದೂರುವಳೆ
ಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲು
ಬೊಮ್ಮ ಜಟ್ಟಿಗನೇನಮ್ಮ
ಮತ್ತೆ ಮುತ್ತಿನಂಥ - ನಿನ್ನೀ ಮಗ
ಹತ್ತಿ ಗವಾಕ್ಷದಿಂದ
ಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನು
ಹೆತ್ತ ಮಕ್ಕಳಿಗಿಲ್ಲದಂತೆ
ಗಡಿಗೆ ಬೆಣ್ಣೆ ಮೆಲ್ಲಲು - ಎನ್ನ ಹೊಟ್ಟಿ
ಮಡುವು ಭಾವಿಯೇನೆ
ಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯ
ಹೊಡೆದರವರ ಮಕ್ಕಳು
ಮರೆತು ಮಂಚದ ಮೇಲೆ - ನಾ ಮಲಗಿರಲು
ಹರಿವ ಹಾವನೆ ತಂದು
ಅರಿಯದಂತೆ ಬಂದು ಮುಸುಕಿನೊಳಗಿಟ್ಟು
ಸರಸರ ಪೋದನಮ್ಮ
ಹರಿದಾಡುವ ಹಾವನು - ನಾ ಹಿಡಿಯಲು
ತರಳ ನಾ ತಡೆಗಾರನೆ
ಹರಕೆಯ ಹೊತ್ತುದನೊಪ್ಪಿಸದಿರಲು
ಗುರುತು ತೋರಲು ಬಂತೇನೊ
ಹಸುಮಗು ನೋಡಿದರೆ - ತಾಟಕನಿವ
ಮೊಸರು ಕಡೆಯುತಿರಲು
ಮಿಸುಕದೆ ಬಂದು ಕಕ್ಕಸ ಕುಚಗಳ
ಮುಸುಕಿನೊಳಗೆ ಹಿಡಿದ
ಕೇಳು ಕೇಳೆಲೆ ಅವ್ವ - ಇವಳು ಬೇ-
ತಾಳನಂತಿರುವಳು
ಬಾಲಕ ನಾನವಳುದ್ದಕೆ ನೆಗೆವೆನೆ
ಜೋಲುವ ತೊಗಲಿಗಾಗಿ
ಮಕ್ಕಳು ಪಡೆದವರು - ಇಲ್ಲದ ಕಳ
ವಿಕ್ಕಬಹುದೆ ಕೃಷ್ಣ
ಸಿಕ್ಕ ತಪ್ಪು ಸಮೇತ ಎಳೆತಂದರೆ
ತಕ್ಕ ಬುದ್ಧಿಯ ಹೇಳುವೆ
ಅಣುಘನರೂಪ ಕಾಣೆ - ನಿನ್ನೀ ಮಗ
ಚಿನುಮಯ ರೂಪ ಕಾಣೆ
ಘನ ಮಹಿಮನು - ಇಂಗಳಗೊಂದಿಯ
ಚೆನ್ನಕೇಶವರಾಯ ಕಾಣೆ
Music
Courtesy: