ಕೀರ್ತನೆ - 215     
 
ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲ ಕೊಕೊಕೋ ಎನ್ನಿರೊ – ನಮ್ಮ ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದು ಕೊಕೊಕೋ ಎನ್ನಿರೊ ಹೊದ್ದಿ ಮೊಲೆಯನುಂಡವಳಸುವನೆ ಕೊಂದ ಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊ ಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲ ಲೊದ್ದೊರಸಿದ ಕಳ್ಳ ಕೊಕೊಕೋ ಎನ್ನಿರೊ ಹದ್ದು ಹಗೆಯ ಹಾಸಿಗೆಯ ಮೇಲೊರಗಿದ ಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊ ಅರ್ಧದೇಹನ ಕೈಯ ತಲೆಯ ಕಪಟದಿಂದ ಕದ್ದು ಬಿಸುಟ ಕಳ್ಳ ಕೊಕೊಕೋ ಎನ್ನಿರೊ ಕೆಂಜಾಜಿಯ ಮಣಿ ಮಲ್ಲಿಗೆ ದಂಡೆಯ ರಂಜೆ ಕದ್ದ ಕಳ್ಳ ಕೊಕೊಕೋ ಎನ್ನಿರೊ ಗು೦ಜಿಯ ದಂಡೆಯ ಕಲ್ಲಿಯ ಚೀಲದ ಮಂಜು ಮೈಯ್ಯ ಕಳ್ಳ ಕೊಕೊಕೋ ಎನ್ನಿರೊ ಅಂಜದೆ ಗೊಲ್ಲರ ಹಳ್ಳಿಯೊಳಗೆ ಹಾಲ ನೆಂಜಲಿಸಿದ ಕಳ್ಳ ಕೊಕೊಕೋ ಎನ್ನಿರೊ ಸಂಜೆ ಬೈಗಿನಲ್ಲಿ ಕರೆಯುವ ಸತಿಯರ ಅಂಜಿಸಿದ ಕಳ್ಳ ಕೊಕೊಕೋ ಎನ್ನಿರೊ ಕೇಸರಿ ಎ೦ಬ ರಕ್ಕಸರನೆಲ್ಲರ ಕೊಂದ ವೇಷಧಾರಿ ಕಳ್ಳ ಕೊಕೊಕೋ ಎನ್ನಿರೊ ಮೋಸದಿ ಬಲಿಯ ದಾನವ ಬೇಡಿ ಅನುದಿನ ಬೇಸರಿಸಿದ ಕಳ್ಳ ಕೊಕೊಕೋ ಎನ್ನಿರೊ ಮೀಸಲ ಅನ್ನವ ಕೂಸಾಗಿ ಸವಿದುಂಡ ವೇಷಧಾರಿ ಕಳ್ಳ ಕೊಕೊಕೋ ಎನ್ನಿರೊ ಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನ ದೇಶದ ದಾರಿಗಳ್ಳ ಕೊಕೊಕೋ ಎನ್ನಿರೊ ಆಕಳೊಳಾಡಿ ಪರಲೋಕಕೆ ನಡೆದಂಥ ಆಕೆವಾಳ ಕಳ್ಳ ಕೂಕೊಕೋ ಎನ್ನಿರೊ ಭೂಕಾ೦ತೆಯ ಸೊಸೆಯರನೆತ್ತೆ ಬಲುಹಿಂದ ನೂಕಿ ತಂದ ಕಳ್ಳ ಕೊಕೊಕೋ ಎನ್ನಿರೊ ಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರ ಕ್ಕೆ ಲಿ ಸಾಕಿಸಿಕೊ೦ಡ ಕಳ್ಳ ಕೊಕೊಕೋ ಎನ್ನಿರೊ ಸಾಕಾರನಾಗಿ ಈ ಲೋಕವನೆಲ್ಲವ ಆಕ್ರಮಿಸಿದ ಕಳ್ಳ ಕೊಕೊಕೋ ಎನ್ನಿರೊ ಕ್ಷೀರವಾರಿಧಿ ವೈಕುಂಠನಗರಿಯನು ಸೇರಿಸಿದ ಕಳ್ಳ ಕೂಕೊಕೋ ಎನ್ನಿರೊ ದ್ವಾರಾವತಿಯನು ನೀರೊಳು ಊರುಗಳ್ಳ ಬಂದ ಕೊಕೊಕೋ ಎನ್ನಿರೊ ದ್ವಾರಕೆಯಾಳುವ ಉಭಯದಾಸರ ತನ್ನ ಊರಿಗೊಯ್ದ ಕಳ್ಳ ಕೊಕೊಕೋ ಎನ್ನಿರೊ ಕಾರಣಾತ್ಮಕ ಕಾಗಿನೆಲೆಯಾದಿಕೇಶವ ಕ್ಷೀರ ಬೆಣ್ಣೆಯ ಕಳ್ಳ ಕೊಕೊಕೋ ಎನ್ನಿರೋ