ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ
ಆನೆ ಬರುತಾದೆ ಎಲ್ಲರು ನೋಡಿರಿ ಒ೦
ದಾನೆಯ ಕೊಂದ ಮದ್ದಾನೆ
ಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿ
ತಾನೇ ತಾನಾಗಿ ಮದ ಸೊಕ್ಕಿದಾನೆ
ನೀರ ಮುಳುಗಿ ಖಳನ ಕೊಂದು ವೇದ ತಂದು
ಬರಮದೇವಗಿತ್ತ ಮದ್ದಾನೆ
ಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದ
ಜಾರ ಕೃಷ್ಣನೆಂಬ ಸೊಕ್ಕಿದಾನೆ
ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತ್ತಿದೆ
ಕುಸುಮಶರನ ಪೆತ್ತ ಮದ್ದಾನೆ
ದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದ
ದಶರಥಸುತನೆಂಬ ಮದ ಸೊಕ್ಕಿದಾನೆ
ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟು
ಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮ
ಬೆಂಬಿಡದೆ ದೈತ್ಯರನು ಕೊಂದ ಗುಣ ಸಂಪನ್ನ
ಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ
ಸಾವಿರ ತೋಳವನ ಸರಸದಿಂದಲಿ ಕಡಿದ
ಭುವನ ರಕ್ಷಕನಾದ ಮದ್ದಾನೆ
ಯೌವನದ ಗೋಪಿಯರ ಕಣ್ಮಣಿ ಎನಿಪ ವಸು
ದೇವಸುತನೆ೦ಬ ಮದ ಸೊಕ್ಕಿದಾನೆ
ಗರುಡವಾಹನವೇರಿ ಧಿಮಕೆಂದು ಬರುತಾನೆ
ಸರುವ ಲೋಕರಕ್ಷಕನೆಂಬ ಮದ್ದಾನೆ
ಉರೆ ಪೂತನಿಯ ಹೀರಿ ಮಾವ ಕ೦ಸನ ಕೊಂದ
ಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ
Music
Courtesy: