ಕೀರ್ತನೆ - 207     
 
ಬಂದಿದೆ ದೂರು ಬರಿದೆ ಪಾಂಡವರಿಗೆ ಕೊಂದವರಿವರು ಕೌರವರನೆಂಬಪಕೀರ್ತಿ ಮುನ್ನಿನ ವೈರದಿ ಕಡು ಸ್ನೇಹವ ಮಾಡಿ ಉನ್ನತ ಲೆತ್ತ ಪಗಡೆಯಾಡಿಸಿ ತನ್ನ ಕುಹಕದಿಂದ ಕುರುಬಲವ ಕೊಂದವನು ಘನ್ನಘಾತಕ ಶಕುನಿಯೊ ಪಾಂಡವರೂ ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನು ಧುರದೊಳು ಷಂಡನ ನೆಪದಿಂದಲಿ ಸರಳ ಮಂಚದ ಮೇಲೆ ಮಲಗಿ ಮೊಮ್ಮಗನ ಕೊರಳ ಕೊಯ್ದವನು ಭೀಷ್ಮನೊ ಪಾ೦ಡವರೊ ಮಗನ ನೆಪದಿ ಕಾಳಗವ ಬಿಸುಟು ಸುರ ನಗರಿಗೈದಲು ವೈರಾಗ್ಯದಲಿ ಜಗವರಿಯಲು ಕುರುವಂಶಕ್ಕೆ ಕೇಡನು ಬಗೆದು ಕೊಂದವನು ದ್ರೋಣನೊ ಪಾಂಡವರೊ ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ ಕೊಟ್ಟ ಭಾಷೆಗೆ ಐವರ ಕೊಲ್ಲದೆ ನೆಟ್ಟನೆ ರಣಮುಖದಲಿ ತನ್ನ ಪ್ರಾಣವ ಬಿಟ್ಟು ಕೊಂದವನು ಕರ್ಣನೊ ಪಾಂಡವರೊ ಮಥನಿಸಿ ಸೂತತನವ ಮಾಡಿ ರಣದೊಳು ಅತಿಹೀನಗಳೆಯುತ ರವಿಸುತನ. ರಥದಿಂದಿಳಿದು ಪೋಗಿ ಕೌರವಬಲವನು ಹತ ಮಾಡಿದವನು ಶಲ್ಯನೊ ಪಾಂಡವರೊ ಜಲದೊಳು ಮುಳುಗಿ ತಪವ ಮಾಡಿ ಬಲವನು ಛಲದಿಂದೆಬ್ಬಿಸಿ ಕಾದುವೆನೆನುತ ಕಲಿ ಭೀಮಸೇನನ ನುಡಿಗೇಳಿ ಹೊರವಂಟು ಕುಲವ ಕೊಂದವನು ಕೌರವನೊ ಪಾಂಡವರೊ ಕವುರವ ಪಾಂಡವರಿಗೆ ಭೇದ ಪುಟ್ಟಿಸಿ ಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿ ಸವುಶಯವಿಲ್ಲದೆ ಕುರುಬಲವ ಕೊ೦ದವನು ಹಿವುಸಕನಾದಿಕೇಶವನೊ ಪಾಂಡವರೊ