ಕೀರ್ತನೆ - 206     
 
ನೀನಾರ ಬಾಂಧವನೊ ನಿಖಿಳ ಯಾದವರೊಳಗೆ ಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿ ಓವಿ ಮೊಲೆ ಕುಡಿಸಿದಳ ಅಸುವ ಸೆಳೆದು ಮಾವ ಕಂಸನ ಕೊಂದು ಮನುಜ ವೇಷದಲಿ ಗಾ೦ ಡೀವಿಯ ಮನೆಯ ಬಂಡಿ ಬೋವನಾದೆ ಸುರನದಿಯ ಸುತನು ಪಾಂಡವರಿಗಾಪ್ಪನು ನಿನಗೆ ಪರಮಭಕ್ತನು ಸ್ವಯಿಚ್ಛಾ ಮರಣಿಯು ಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿ ಶರಮಂಚದೊಳುಪಾಯದಲಿ ಮಲಗಿಸಿದೆ ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲು ಸೋದರಳಿಯನು ಮೂರು ಲೋಕವರಿಯೆ ಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿ ಸೋದರನ ಷಡುರಥರ ಕೈಲಿ ಕೊಲ್ಲಿಸಿದೆ ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿ ನರನ ಕೈಯಿಂದ ಸೈಂಧವನ ಕೊಲ್ಲಿಸಿದೆ ಶಪಥದಲಿ ರಣದೊಳರಸನ ಹಿಡಿವೆನೆಂಬವಗೆ ತಪಸಿಗಳ ತಂದು ತತ್ವವ ಬೋಧಿಸಿ ಕಪಟವರಿಯದ ನೃಪನ ಕೈಯೊಳನೃತವ ನುಡಿಸಿ ಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ ಯಮಳರನು ಪಡೆದ ತಾಯಿಗೆ ಸಹೋದರನ ಭೂ ರಮಣರೊಳಗಗ್ಗಳೆಯನತಿ ಧೈರ್ಯನು ಸಮರದಲಿ ರವಿಸುತನ ರಥಕೆ ಸೂತನ ಮಾಡಿ ಯಮಸುತನ ಕೈಲಿ ಮಾವನ ಕೊಲ್ಲಿಸಿದೆ ಜನವರಿಯದಂತೆ ಜೀವನದೊಳಡಗಿರ್ದವಗೆ ಮನಕೆ ಖತಿಗೊಳಿಸಿ ಬರ ಸೆಳೆದು ನಗುತ ಅನುವರದೊಳಾಯತದ ತೊಡೆಯ ಸನ್ನೆಯ ತೋರಿ ಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ ದಿರದೊಳೈವರು ನಿದ್ರೆಗೈಯುತಿರಲು ನರವೃಕೋದರ ಧರ್ಮನ೦ದನರನಗಲಸಿಯೆ ಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿ ಭಾವ ಮೈದುನರೈವರನು ರಕ್ಷಿಸಿ ಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮ ದೇವ ನೆಲೆಯಾದಿಕೇಶವ ವೆಂಕಟೇಶ