ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು - ಮಿಕ್ಕ
ಬಣಗು ದೈವದ ಗೊಡವೆ ಬೇಡ ನರಕ ತಪ್ಪದು
ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರು
ಸೊಕ್ಕಿನಿಂದ ಸೊ೦ಟಮುರುಕ ಬೈರೇ ದೇವರು
ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದ
ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು
ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದು
ಬತ್ತಲೆಯೆ ದೇವರೆದುರು ಬರುವುದು ನೋಡಿರೊ
ಮತ್ತೆ ಬೇವಿನುಡುಗೆಯ ಅರ್ತಿಯಿ೦ದುಟುಗೊಂಡು
ಮುಕ್ತಿ ಕಾ೦ಬೆವೆ೦ಬ ಮೌಢ್ಯ ಬೇಡಿರೊ
ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡು
ಹಾಳು ಮಾಡಿ ಕೈಯಲಿದ್ದ ಹೊನ್ನು ಹಣಗಳ
ಬಾಳುತಿಪ್ಪ ಕೋಣ ಕುರಿಯ ಏಳಬೀಳ ಕೊರಳ ಕೊಯ್ದು
ಬೀಳ ಬೇಡಿ ನರಕಕೆಂದು ಹೇಳ ಬಂದೆನೊ
ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡು
ಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತು
ಗುಳೆ ಗೊರಜೆ ಕೂಡಿ ತಿಂದು ಕಳ್ಳು ಕೊಡನ ಬರಿದು ಮಾಡುವಂಥ
ಪೊಳ್ಳು ದೈವದ ಗೊಡವೆ ಬೇಡ ನರಕ ತಪ್ಪದು
ಪೊಡವಿಗಧಿಕ ವಿಜಯನಗರದೊಡೆಯ ಕಟ್ಟಿ ವೆಂಕಟೇಶ
ಕಡು ಚೆಲ್ವ ಕಟ್ಟಾಣಿ ಕನಕನೊಡೆಯ
ಬಡದಾದಿ ಕೇಶವನ ಪಾದ ಬಿಡದೆ ಭಜಿಸಿರೊ
ಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ
Music
Courtesy: