ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ
ಮಾನವರೆಲ್ಲ ಮೌನದೊಳಗೆ ನಿಂದು
ತನ್ನ ತಾನರಿತುಕೊಂಬುದೆ ಒಂದು ಸ್ನಾನ
ಅನ್ಯಾಯ ಮಾಡದಿರುವುದೊಂದು ಸ್ನಾನ
ಅನ್ನದಾನವ ಮಾಡುವುದೊಂದು ಸ್ನಾನ - ಹರಿ
ನಿನ್ನ ಧ್ಯಾನವೆ ನಿತ್ಯ ಗಂಗಾ ಸ್ನಾನ
ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ
ಪರನಿಂದೆಯ ಮಾಡದಿದ್ದರೊಂದು ಸ್ನಾನ
ಪರೋಪಕಾರ ಮಾಡುವುದೊಂದು ಸ್ನಾನ
ಪರತತ್ತ್ವವನರಿತುಕೊಂಬುದೆ ಒಂದು ಸ್ನಾನ
ಸಾಧು ಸಜ್ಜನರ ಸ೦ಗವೆ ಒಂದು ಸ್ನಾನ
ಭೇದಾಭೇದವಳಿದಡೆ ಒಂದು ಸ್ನಾನ
ಆದಿಮೂರುತಿ ಕಾಗಿನೆಲೆಯಾದಿಕೇಶವನ
ಪಾದ ಧ್ಯಾನವೆ ನಿತ್ಯ ಗಂಗಾ ಸ್ನಾನ