ಕೀರ್ತನೆ - 196     
 
ಸಾಧು ಸಜ್ಜನ ಸತ್ಯಗುಣಕಿದಿರುಂಟೆ ಆದಿಕೇಶವನ ಪೋಲುವ ದೈವವುಂಟೆ ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆ ಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆ ವಿತ್ತವನರಸುವಂಗೆ ಮುಕ್ತಿಯೆಂಬುದುಂಟೆ ಉತ್ತಮರ ಸಂಗಕಿಂತಧಿಕ ಧರ್ಮವುಂಟೆ ಸುತಲಾಭಕಿಂತಧಿಕ ಲಾಭವುಂಟೆ ಮತಿರಹಿತನೊಳು ಚತುರತೆಯುಂಟೆ ಪತಿಸೇವೆಗಿ೦ತಧಿಕ ಸೇವೆಯುಂಟೆ ಸತಿಯಿಲ್ಲದವಗೆ ಸಂಪದವೆಂಬುದುಂಟೆ ಪಿಸುಣಗಿನ್ನಧಿಕ ಹೀನನುಂಟೆ ವಸುಧೆಯೊಳನ್ನದಾನಕೆ ಸರಿಯುಂಟೆ ಅಶನವ ತೊರೆದ ಯೋಗಿಗೆ ಭಯವುಂಟೆ ವ್ಯಸನಿಯಾದ ನೃಪನಿಗೆ ಸುಖವುಂಟೆ ಧನಲೋಭಿಗಿನ್ನಧಿಕ ಹೀನನುಂಟೆ ಮನವಂಚಕ ಕಪಟಿಗೆ ನೀತಿಯುಂಟೆ ಸನುಮಾನಿಸುವ ಒಡೆಯಗೆ ಬಡತನವುಂಟೆ ವಿನಯವಾಗಿಹ ಸಂಗದೊಳು ಭಂಗವುಂಟೆ ಹರಿಭಕ್ತಿಯಿಲ್ಲದವಗೆ ಪರಲೋಕವು೦ಟೆ ಪರಮಸಾತ್ವಿಕ ಗುಣಕೆ ಪಿರಿದುಂಟೆ ಪರನಿಂದೆಗಿ೦ತಧಿಕ ಪಾತಕವುಂಟೆ ವರದಾದಿಕೇಶವನಲ್ಲದೆ ದೈವವುಂಟೆ