ಕೀರ್ತನೆ - 195     
 
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ ತಾನು ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ ಮಾನ ಹೀನನಾಗಿ ಬಾಳ್ವ ಮನುಜನ್ಯಾತಕೆ ಜ್ಞಾನವಿಲ್ಲದೆ ನೂರು ಕಾಲ ಬದುಕಲ್ಯಾತಕೆ ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆ ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆ ನೀತಿಯರಿತು ನಡೆಯದಿರುವ ಬ೦ಟನ್ಯಾತಕೆ ಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ ಸನ್ನೆಯರಿತು ನಡೆಯದಿರುವ ಸತಿಯು ಯಾತಕೆ ಮನ್ನಣಿಂದ ನಡೆಸದಿರುವ ದೊರೆಯು ಯಾತಕೆ ಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆ ಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ