ಕೀರ್ತನೆ - 191     
 
ಮೆರೆಯದಿರು ಮೆರೆಯದಿರು ಎಲೆ ಮಾನವ - ನಿನ್ನ ಸಿರಿಯ ಹವಣೇನು ಹೇಳೆಲೊ ಮಂಕು ಜೀವ ಸಿರಿಯೊಳಗೆ ಮಾಧವನೊ ಹಿರಿಯರೊಳು ಬ್ರಹ್ಮನೋ ದುರುಳ ರಾವಣನ ಸ೦ಪದವೊ ನಿನಗೆ ದುರಿಯೋಧನನಂತೆ ಮಕುಟವರ್ಧನನೊ - ನಿನ್ನ ಸಿರಿಯ ಹವಣೇನು ಪೇಳೆಲೊ ಮಾನವ ಬಲುಹಿನಲಿ ವಾಲಿಯೋ ಚೆಲುವಿಕೆಗೆ ಕಾಮನೋ ಸಲುಗೆಯಲಿ ನಾರದನೊ ಹೇಳು ನೀನು ಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲುಗುಣನೊ ಕುಲದಲ್ಲಿ ವಸಿಷ್ಠನೊ ಹೇಳೆಲೊ ಮಾನವ ತ್ಕಾಗದಲಿ ಕರ್ಣನೋ ಭೋಗದಲಿ ಸುರಪನೋ ಭಾಗ್ಯದಲಿ ದಶರಥನೊ ಹೇಳು ನೀನು ರಾಗದಲಿ ತುಂಬುರನೊ ಯೋಗದಲಿ ಸನಕನೊ ಹೀಗ್ಯಾರ ಹೋಲುವೆ ಹೇಳೆಲೊ ಮಾನವ ಯತಿಗಳಲ್ಲಗಸ್ತ್ಯನೊ ಜೊತೆಯಲಿ ಹನುಮನೊ ವ್ರತಕೆ ಶುಕಮುನಿಯೇನೊ ಹೇಳು ನೀನು ಶ್ರುತಿಪಾಠ ವಿಬುಧರೊಳು ಸೂತನೋ - ನಿನ್ನ ಶುಭ ಮತಿಯ ಹವಣೇನು ಹೇಳಲೊ ಮಾನವ ವಿದ್ಯೆಯಲಿ ಸುರಗುರುವೊ ಬುದ್ಧಿಯಲಿ ಮನುಮುನಿಯೊ ಶ್ರದ್ಧೆಯಲಿ ನೀನಾರ ಹೋಲ್ವೆ ಹೇಳು ಸಿದ್ಧರೊಳು ನವಕೋಟಿಯೊಳೊಬ್ಬನೊ ನೀನು ಕ್ಷುದ್ರ ಮಾನವ ನಿನ್ನ ಸಿರಿಯ ಹವಣೇನು ಗೆಲ್ಲು ಸೋಲಿನ ಮಾತು ಸಲ್ಲದೆಲವೋ ನಿನಗೆ ಎಲ್ಲವನು ಬಿಡು ಗರ್ವ ನಿನಗೇತಕೊ ಬಲ್ಲೆಯಾದರೆ ಆದಿಕೇಶವನ ನಾಮವನು ಸೊಲ್ಲುಸೊಲ್ಲಿಗೆ ತುತಿಸಿ ಸುಖಿಯಾಗಿ ಬಾಳು