ಕೀರ್ತನೆ - 189     
 
ಬಾಯಿ ನಾರಿದ ಮೇಲೆ ಏಕಾಂತವೆ ತಾಯಿ ತೀರಿದ ಮೇಲೆ ತೌರಾಸೆಯೆ ಕಣ್ಣು ಕೆಟ್ಟ ಮೇಲೆ ಕಡುರೂಪು ಚೆಲ್ಲಿಕೆಯೆ ಬಣ್ಣಗುಂದಿದ ಮೇಲೆ ಬಹುಮಾನವೆ ಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆ ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ ಚಳಿಜ್ಜರಕೆ ಚಂದನದ ಲೇಪ ಹಿತವೆ ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ ಬೆಲೆಬಿದ್ದ ಸರಕಿನೊಳು ಲಾಭ ಉಂಟೆ ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ ಸತ್ಯವಾದ ಭಕ್ತಿ ಇರದವಗೆ ಮುಕ್ತಿಯುಂಟೆ