ದಾನಧರ್ಮವ ಮಾಡಿ ಸುಖಯಾಗು ಮನವೆ
ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ
ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯ
ಅಕ್ಕರಿಂದಲಿ ಪೂಜೆ ಮಾಡಬೇಕೆ
ಗಕ್ಕನೆಯ ಯಮನ ದೂತರೆಳೆದೊಯ್ಯುವಾಗ
ಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ
ಸಂಭ್ರಮದಲಿ ಒಂದೊತ್ತು ನೇಮದೊಳಗಿದ್ದು
ತಂಬಿಟ್ಟನಾ ದೀಪ ಹೊರಲೇತಕೆ
ಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬ
ದೊಂಬಿ ದೈವಗಳ ಭಜಿಸದಿರು ಮನವೆ
ಚಿಗುರಲೆ ಬೇವಿನ ಸೊಪ್ಪುಗಳ ನಾರಸೀರೆ
ಬಗೆಬಗೆಯಿಂದ ಶೃಂಗಾರ ಮಾಡಿ
ನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನು
ಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ
ದಾನಧರ್ಮ ಪರೋಪಕಾರವ ಮಾಡು
ದೀನನಾಗಿ ನೀ ಕೆಡಬೇಡವೊ
ಜ್ಞಾನವಿಲ್ಲದೆ ಹೀನ ದೈವನ ಭಜಿಸಿದರೆ
ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ
ನರಲೋಕದಲ್ಲಿ ಯಮನ ಬಾಧೆಯನು ಕಳೆಯಲು
ವರ ಪುಣ್ಯ ಕಥೆಗಳನ್ನು ಕೇಳುತಲಿ
ಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿ
ಸ್ಥಿರ ಪದವಿಯನು ಪಡೆ ಹುಚ್ಚು ಮನವೆ
Music
Courtesy:
ಸ್ಥಲ -
ವಿಷಯ -
ಸಮಾಜ ಚಿಂತನೆ: ನೀತಿಬೋಧನೆ