ಕೀರ್ತನೆ - 180     
 
ಕೇಶವನೊಲುಮೆಯು ಆಗುವ ತನಕ ಹರಿ ದಾಸರೊಳಿರುತಿರು ಹೇ ಮನುಜ ಕ್ಲೇಶಪಾಶ೦ಗಳ ಹರಿದು ವಿಲಾಸದಿ ಶ್ರೀಶನ ನುತಿಗಳ ಪೊಗಳುತ ಮನದೊಳು ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೆ ಶ್ರೀಶನ ಭಕುತರ ದೂಷಿಸಿದಾ ಫಲ ಕಾಸು ಕೊಟ್ಟರೆ ಬಿಟ್ಟೀತೆ ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ ಕ್ಲೇಶಗೊಳಿಸದೆ ಇದ್ದೀತೆ ಭೂಸುರಸ್ವವ ಹ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ ಜೀನನ ವಶದೊಳು ನಾನಾ ದ್ರವ್ಯವಿರೆ ದಾನಧರ್ಮಕೆ ಮನಸಾದೀತೆ ಹೀನ ಮನುಜನಿಗೆ ಜ್ಞಾನವ ಬೋಧಿಸೆ ಹೀನ ವಿಷಯ ಅಳಿದ್ಹೋದೀತೆ ಮಾನಿನಿ ಮನಸದು ನಿಧಾನವಿರದಿರೆ ಮಾನಾಭಿಮಾನಗಳುಳಿದೀತೆ ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ ಸತ್ಯಧರ್ಮಗಳ ನಿತ್ಯವು ಬೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ ತತ್ತ್ವದ ಅರ್ಥವ ವಿಚಿತ್ರದಿ ಪೇಳೆ ಕತ್ತೆಯ ಚಿತ್ತಕೆ ಹತ್ತೀತೆ ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ ಮುತ್ತು ಕೊಟ್ಟರೆ ಮಾತನಾಡೀತೆ ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯ ತೋರದೆ ಇದ್ದೀತೆ ನ್ಯಾಯವ ಬಿಟ್ಟನ್ಯಾಯವ ಪೇಳುವ ನಾಯಿಗೆ ನರಕವು ತಪ್ಪೀತೆ ಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆ ಘಾಯವಾಗದೆ ಬಿಟ್ಟೀತೆ ತಾಯಿತಂದೆಗಳ ನೋಯಿಸಿದವನಿಗೆ ಮಾಯದ ಮರಣವು ತಪ್ಪೀತೆ ಮಾಯಾಜಾಲವ ಕಲಿತ ಮನುಜನಿಗೆ ಕಾಯ ಕಷ್ಟವು ಬಿಟ್ಟೀತೆ ಸಾಧು ಸಜ್ಜನರ ನೋಯಿಸಿದ ಮಾಯಾ ವಾದಿಗೆ ನರಕವು ತಪ್ಪೀತೆ ಬಾಧಿಸಿ ಪರರರ್ಥವ ದೋಚುವವಗೆ ವ್ಯಾಧಿಯು ಕಾಡದೆ ಬಿಟ್ಟೀತೆ ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ ಮೋದವೆಂದಿಗು ಆದೀತೆ ಕದ್ದು ಒಡಲ ಪೊರೆವವನ ಮನೆಯೊಳು ಇದ್ದದ್ದು ಹೋಗದೆ ಉಳಿದೀತೆ ಅಂಗಜ ವಿಷಯಗಳನು ತೊರೆದಾತಗೆ ಅಂಗನೆಯರ ಸುಖ ಸೊಗಸೀತೆ ಸಂಗ ದುಃಖಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ರುಚಿಸೀತೆ ಇಂಗಿತವರಿತ ನಿಸಂಗಿ ಶರೀರ ವ ಜ್ರಾಂಗಿಯಾಗದೆ ತಾನಿದ್ದೀತೆ ಮಂಗಳ ಮಹಿಮನ ಅಂಫ್ರಿಯ ಕಾಣದ ಮಂಗಗೆ ಮುಕುತಿಯು ದೊರಕೀತೆ ಕರುಣಾಮೃತದಾಭರಣವ ಧರಿಸಿದ ಶರಣಗೆ ಸಿರಿಯು ತಪ್ಪೀತೆ ಕರುಣ ಪಾಶದುರವಣೆ ಹರಿದಾತಗೆ ಶರಣರ ಕರುಣವು ತಪ್ಪೀತೆ ಅರಿತು ಶಾಸ್ತ್ರವನಾಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ ವರ ವೇಲಾಪುರದಾದಿಕೇಶವನ ಸ್ಮರಿಸುವನಿಗೆ ಮೋಕ್ಷ ತಪ್ಪೀತೆ