ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು
ಜಲಜನಾಭನ ಕೃಪೆಯ ಪಡೆದವರು ಕೇಳಿ
ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆ
ಉತ್ತಮರ ಜೀವನಕೆ ದಾರಿಯಿಲ್ಲ
ನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲ
ಅರ್ಥ ಸಂಪನ್ನರಾಗನುಭವಿಸುತಿಹರು
ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿ
ಪುತ್ರ ಪಿತನಾಗಿ ಪಿತ ಪುತ್ರನಾಗಿ
ಮತ್ತೆ ಗಂಡನಿಗೆ ಹೆ೦ಡತಿಯೆ ಗ೦ಡಳು ಆಗಿ
ವರ್ತಿಸುವರಯ್ಯ ತಮಗೆದುರಿಲ್ಲವೆಂದು
ವಾವೆವರಸೆಯು ತಪ್ಪಿ ವೈರಿ ವರ್ಗವು ಹೆಚ್ಚಿ
ದೇವ ಬ್ರಾಹ್ಮಣ ಗುರು ಹಿರಿಯರನು ಜರಿದು
ಕೇವಲಾಧಮರೆಲ್ಲ ಸಿರಿ ಮದದಿ ಸೊಕ್ಕಿದರು
ಕಾವರಾರೈ ಸಾಧು ಸಜ್ಜನರನೀಗ
ವೇದ ವಿಪ್ರರು ತಮ್ಮ ವೃತ್ತಿ ಸ್ಥಾಸ್ಥ್ಯವ ಕಳೆದು
ಆಧಾರವಿಲ್ಲದೆ ತಿರಿದು ತಿಂಬುವರು
ಕಾದುವ ಶೂರರಿಗೆ ಕಾಸು ಕೊಡುವವರಿಲ್ಲ
ಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು
ಅನ್ನವಸ್ತಗಳಿ೦ದ ಚೆನ್ನಾಗಿ ಬಾಳುವರ
ಭಿನ್ನ ತ೦ತ್ರವ ಮಾಡಿ ಕೆಡಿಸುತಿಹರು
ಗನ್ನಗತಕವ ಮಾಳ ಗ್ರಾಮಣ್ಯಗಳ ಕಲಿತು
ಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ
ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆ
ಮಾಳಿಗೆಯ ಮನೆ ತುರುವು ಧನಧಾನ್ಯವು
ವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆ
ಸೂಳೆಯನು ನೆಚ್ಚಿ ಕಾಲವ ಕಳವರಯ್ಯ
ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತ
ಪೂರೈಸಿ ಕೊಡುವರರಸುಗಳೆಲ್ಲರು
ಧಾರಿಣಿಯ ಭಾರವನು ತಾಳಲಾರದೆ ದೇವಿ
ಶ್ರೀರಾಮ ರಾಮೆಂದು ಶಿರವ ತೂಗುವಳು
ಉತ್ತಮ ಪತಿವ್ರತೆಯು ಪತಿ ನೀನೆ ಗತಿಯೆನಲು
ಮುತ್ತೈದೆಗುಡುವುದಕೆ ವಸ್ತ್ರವಿಲ್ಲ :
ಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳು
ವರ್ತನೆಯಿದೇನಯ್ಯ ಕಲಿಯುಗದ ಮಹಿಮೆ
ಪತಿವ್ರತೆಯರೆಂಬುವರು ಶತಸಹಸ್ತಕೊಬ್ಬರು
ಮಿತಿಮೀರಿ ಇಹರಯ್ಯ ಇತರ ಜನರು
ಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿ
ಗತಿಗೆಟ್ಟು ಹೋಗುವರು ಮೂರು ತೊರೆದು
ಹರಿಹರರ ಪೂಜೆಗಳು ಹಗರಣಗಳಾದವು
ಉರಿ ಮಾರಿ ಚಾಮುಂಡಿ ಶಕ್ತಿಗಳಿಗೆ
ಕುರಿ ಕೋಣ ನೈವೇದ್ಯ ಧೂಪದೀಪಗಳಿಂದ
ಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ
ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲ
ಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆ
ತಡವ ಮಾಡಲಿ ಬೇಡ ತಾಳಲಾರದು ಲೋಕ
ಮೃಡನ ವೈರಿಯ ಪೆತ್ತ ಆದಿಕೇಶವನೆ
Music
Courtesy:
ಸ್ಥಲ -
ವಿಷಯ -
ಸಮಾಜ ಚಿಂತನೆ: ನೀತಿಬೋಧನೆ