ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ
ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು
ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು
ಭಾವವಿಲ್ಲದ ಭಕುತಿ ಅದು ಕುಹಕ 'ಯುಕುತಿ
ಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು
ಸೇವೆಯರಿಯದ ದಣಿಯು ಕಲ್ಲಿನಾ ಕಣಿಯು
ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು
ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು
ಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು
ಮರ್ಮವಿಲ್ಲದ ಮಾತು ಒಡಕು ಮಡಕೆ ತೂತು
ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ತುರಿಯು
ಸೌಖ್ಯವಿಲ್ಲದ ಊಟ ಅದು ಕಾಳಕೂಟ
ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು
ಸೊಕ್ಕಿ ನಡೆಯುವ ಭ್ರುತ್ಯ ಅವ ಕ್ರೂರ ಕೃತ್ಯ
ಕಂಡು ಕರೆಯದ ನೆಂಟ ಮೊನೆಯು ಕೆಟ್ಟಿಹ ಕಂಟ
ಉಂಡು ನಗದಿಹ ಮೋರೆ ಅದು ಕಹಿಯ ಸೋರೆ
ದಂಡಿಗಂಜುವ ಬಂಟ ಒಡಕು ಹರವಿಯ ಕಂಠ
ಗಂಡಗ೦ಜದ ನಾರಿ ಅವಳೆ ಹೆಮ್ಮಾರಿ
ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯು
ಕೊಟ್ಟು ಪೇಳುವ ದಾತ ಅವ ಹೀನ ಜಾತ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಫ್ರಿ
ಮುಟ್ಟಿ ಭಜಿಸದ ನರನು ಅವನೆ ವಾನರನು
Music
Courtesy:
ಸ್ಥಲ -
ವಿಷಯ -
ಸಮಾಜ ಚಿಂತನೆ: ನೀತಿಬೋಧನೆ