ಕೀರ್ತನೆ - 169     
 
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು ಉಂಬುಡುವುದಕಿಲ್ಲದರಸಿನೋಲಗಕಿಂತ ತುಂಬಿದೂರೊಳಗೆ ತಿರಿದುಂಬುವುದೆ ಲೇಸು ಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ - ಹರಿ ಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು ಒಡನೆ ಹಂಗಿಸುವನೋಗರವನುಂಬುದಕಿಂತ ಕುಡಿನೀರು ಕುಡಿದುಕೊಂಡಿರುವುದೇ ಲೇಸು ಬಿಡದೆ ಬಾ೦ಧವರೊಡನೆ ಕಡಿದಾಡುವುದಕಿಂತ ಅಡವಿಯೊಳಗಜ್ಞಾತ ವಾಸವೇ ಲೇಸು ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತ ಹಸನಿಲ್ಲದ ಹಾಳುಗುಡಿಯೇ ಲೇಸು ಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯ ವಸುಮತಿಯೊಳು ನಿನ್ನ ದಾಸತ್ವವೇ ಲೇಸು