ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮ
ಬಾಡದಾಧಿಪನ ಕಿಂಕರನ ಕೂಡ ತೊಡರು
ವಾರಿಕಲ್ಲಾನೆ ವಜ್ರದ ಮೃಗೇ೦ದ್ರನ ಕೂಡ
ಹೋರಿ ಹೊದುಕುಳಿಗೊಂಡು ಗೆಲಬಲ್ಲುದೆ ?
ಭೂರಿ ಭೂತಗಳೆ ಭೂಸತಿಯ ಕಾ೦ತನ ನಾಮ
ಧಾರಿಗಳ ತೊಡರು ನಿಮಗಳವಡದು ನಾನರಿವೆ
ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡ
ಪ್ರಾಣದಿ೦ ಕಾದಿ ಜಯಿಸುವುದೆ ಹೇಳಾ
ಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳು
ದಾನವಾರಿಯ ದಾಸಗಳವಡವು ನಾನರಿವೆ
ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳು
ನಲಿದು ಉಯ್ಯಾಲೆಯನಾಡುವವೆ ಹೇಳಾ
ಕಲಿ ಬಾಡದಾದಿಕೇಶವರಾಯ ಚಕ್ರದಲಿ
ತಲೆಗಳನು ಚೆಂಡಾಡಿಸುವ ಕಾಣೊ ಬೇಡ
Music
Courtesy: