ದೇಶಾಧಿಪತಿ ನರಹರಿಯೆ ನಿನ್ನಯ ಪಾದ
ದಾಸರ ದಾಸನೆಂದೆನಿಸಬೇಕನ್ನ
ರಜತಮೋಗುಣ ಪ್ರವರ್ತಕ ಮೂಲಾಂತರದಿಂ
ಯಜಮಾನತನದಹಂಕಾರವನು ಒಲ್ಲೆ
ಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾ೦ಬುಜ
ರಜ ಭಜಕರ ಭಜಕನೆಂದೆನಿಸೆ
ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ-
ಸ್ತೂರಿ ತಿಲಕವನಿಡುವುದ ನಾನೊಲ್ಲೆ
ಸಿರಿ ಊರ್ಧ್ವಪು೦ಡ್ರ ದ್ವಾದಶನಾಮವಿಡುವವರ
ಪರಿಚಾರಕರ ಪರಿಚಾರಕನೆನಿಸೆನ್ನ
ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನು
ಆದರದ ಅಮೃತಾನ್ನ ಉಣುವುದನೊಲ್ಲೆ
ಬೋಧೆಯನು ಹೇಳುವ ಕೇಳುವ ಹರಿದಾಸರ
ಪಾದತೀರ್ಥ ಪ್ರಸಾದವನುಣಿಸೆನ್ನ
ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿ
ಶೀಲರಹಿತ ಬ್ರಾಹ್ಮಣನಾಗಲೊಲ್ಲೆ
ಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ-
ಡಾಲನ ಮನೆ ಬಾಗಿಲ ಕಾಯಿಸೆನ್ನ
ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದು
ಘೋರ ನರಕದಿ ಬೀಳುವುದನು ನಾನೊಲ್ಲೆ
ವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯ
ದ್ವಾರಪಾಲಕನೆಂದೆನಿಸೆನ್ನ
ಪಟ್ಟಿಪಟ್ಟಾವಳಿ ದಿವ್ಯ ದುಕೂಲ ಮಿಂ-
ಚಿಟ್ಟ ವಸ್ತ್ರ ಉಡುವುದನೊಲ್ಲೆ
ನೆಟ್ಟನೆ ಕಾವಿ ಕಾಷಾಯಾಂಬರಗಳನು
ಉಟ್ಟವರ ಬಂಟನೆಂದೆನಿಸೆನ್ನ
ಅರ್ಥ ವಿಷಯಂಗಳ ಫಲಾಪೇಕ್ಷಯಿ೦ ಪುಣ್ಯ
ತೀರ್ಥಯಾತ್ರೆಯ ಮಾಡಲೊಲ್ಲೆ
ದೈತ್ಯ ಮರ್ದನ ಬಾಡದಾದಿಕೇಶವ ನಿನ್ನ
ಕೀರ್ತನಗೈವರ ಸ್ತುತಿಕನೆನಿಸೆನ್ನ
Music
Courtesy: