ಹೇಗಿದ್ದು ಹೇಗಾದೆಯೊ ಆತ್ಮ
ಯೋಗೀಶನಾನಂದಪುರದಲಿರುವುದ ಬಿಟ್ಟು
ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು
ಕುಸುಕಾಡಿ ನುಡಿದು ನೆಲಬಟ್ಟೆವಿಡಿದು
ಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು
ವಸುಧೆಯಲಿ ದಿನಗಳದೆಯಲ್ಲ ಆತ್ಮ
ಎಳಗೆರೆಯಲಿ ಆಡಿ ಯೌವನದೂರಿಗೆ ಬಂದು
ಥಳಥಳಿಪ ಹಸ್ತಾದ್ರಿ ನೆಳಲ ಸೇರಿ
ಅಳಲು ಸುತ ಬೆಳದು ದಾರಿದ್ರ್ಯ ಪೇಟೆಗೆ ಬಂದು
ಹಳೆಯ ಬೀಡಿಗೆ ಪಯಣವೇ ಆತ್ಮ
ಗನ್ನಗತಕದ ಮಾತು ಇನ್ನು ನಿನಗೇತಕೋ
ಮುನ್ನ ಮಾಡಿದ ಕರ್ಮಭರದೊಡಲಿದೆ
ಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ-
ಸನ್ನ ಮೂರುತಿಯ ಭಜಿಸೆಲೊ ಆತ್ಮ