ಹೂವ ತರುವರ ಮನೆಗೆ ಹುಲ್ಲ ತರುವೆ
ಆವ ಪರಿಯಲಿ ಸಲಹೊ ದೇವ ಚಿನ್ಮಯನೆ
ಈರೇಳು ಜನ್ಮದಿ೦ ದಾಸನಾಗಿಹೆ ನಾನು
ಸೇರಿದೆನೊ ತವ ಶರಣರ ಸೇವೆಗೆ
ಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿ
ನಾರಸಿ೦ಹನೆ ಕಾಯೊ ನಮ್ಮ ಕುಲಸ್ವಾಮಿ
ರ೦ಗನಾಥನೆ ನಿನ್ನ ಡಿಂಗರಿಗನೋ ನಾನು
ಡಂಗುರವ ಹೊಯಿಸಯ್ಯ ದಾಸನೆಂದು
ಭ೦ಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟು
ಗ೦ಗೆ ಜನಕನೆ ಕಾಯೊ ಚರಣಕ್ಕೆ ಶರಣು
ಎಷ್ಟು ಮಾಡಲು ನಿನ್ನ ಬಂಟನೋ - ವೈಷ್ಣವರ
ಹುಟ್ಟು ದಾಸಿಯ ಮಗನು ಪರದೇಶಿಯೋ
ಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ - ಕೈ
ಬಿಟ್ಟೆಯಾದರೆ ನಿನಗೆ ಹರಿದಾಸರಾಣೆ